ಪುತ್ತೂರು: ಪುತ್ತೂರಿನಲ್ಲಿಯೇ ಚಾಲನಾ ಪರೀಕ್ಷೆ ನಡೆಸುವಂತೆ ಪುತ್ತೂರು, ಕಡಬ, ಸುಳ್ಯ ತಾಲೂಕಿನ ವಾಹನ ಚಾಲನಾ ತರಬೇತಿ ಶಾಲೆಯ ಮುಖ್ಯಸ್ಥರು ಪುತ್ತೂರಿನ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ವಾಹನ ಚಾಲನೆಯ ಪರವಾನಿಗೆಗಾಗಿ ಚಾಲನಾ ಪರೀಕ್ಷೆಯನ್ನು ಇದುವರೆಗೆ ಪುತ್ತೂರಿನಲ್ಲಿಯೇ ನಡೆಲಾಗುತ್ತಿದ್ದು, ಸ್ಥಳಾವಕಾಶ ಕಡಿಮೆ ಇರುವ ಕಾರಣ ಇನ್ನು ಮುಂದೆ ಮಂಗಳೂರಿನಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಇರುವ ಹಿನ್ನಲೆಯಲ್ಲಿ ಮನವಿ ನೀಡಲಾಯಿತು.
ಇದುವರೆಗೆ ಪುತ್ತೂರಿನ ಸಾರಿಗೆ ಇಲಾಖೆಯಲ್ಲಿಯೇ ಚಾಲನಾ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಮಂಗಳೂರಿಗೆ ಬದಲಾಯಿಸಿದಲ್ಲಿ ಈ ಭಾಗದ ಜನರಿಗೆ ಮಂಗಳೂರಿಗೆ ಹೋಗಿ ಬರುವುದು ಕಷ್ಟಕರವಾಗಲಿದೆ.
ಪುತ್ತೂರಿನಲ್ಲಿ ವಾಹನ ಚಾಲನಾ ಪರವಾನಿಗೆ ನೀಡುವುದಕ್ಕೆ ಮೊದಲು ಚಾಲನಾ ಪರೀಕ್ಷೆ ನಡೆಸಲು ಸರಿಯಾದ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಪುತ್ತೂರು ನಗರ ಭಾಗದಲ್ಲಿ ಟೆಸ್ಟ್ ಯಾರ್ಡ್ ನಿರ್ಮಾಣಕ್ಕೆ ಸರಕಾರಿ ಸ್ಥಳವನ್ನು ಗುರುತಿಸಿ ಸಾರಿಗೆ ಇಲಾಖೆಗೆ ಮಂಜೂರು ಮಾಡುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.