ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮಂಜೇಶ್ವರ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಕೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಆನಂತರ ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ.
ಈತ ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕಾರಣಕ್ಕೆ ನೌಫಾಲ್ ನನ್ನು ಚಿಕಿತ್ಸೆಗೆಂದು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಮೇ 6ರಂದು ನಸುಕಿನ ವೇಳೆ ಬೆಡ್ ಶೀಟನ್ನೇ ಕಿಟಕಿಗೆ ಕಟ್ಟಿ ಅದನ್ನು ಕುಣಿಕೆಯಾಗಿಸಿ ಕೊರಳೊಡ್ಡಿದ್ದಾನೆ.
ಅದೇ ಕೊಠಡಿಯಲ್ಲಿ ಇತರ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಹೊರಗಡೆ ಕಾವಲಿಗೆ ಪೊಲೀಸರಿದ್ದರು. ಅದರ ನಡುವೆಯೂ ಯುವಕ ಸಾವಿಗೆ ಶರಣಾಗಿದ್ದಾನೆ. ಮನೆಯವರನ್ನು ಬಿಟ್ಟು ಗಾಂಜಾ ವ್ಯಸನ ಮತ್ತು ಅದರ ವಹಿವಾಟಿನಲ್ಲಿ ನಿರತನಾಗಿದ್ದ ಯುವಕ ನೌಫಾಲ್ ಆಚಾನಕ್ಕಾಗಿ ಜೈಲು ಸೇರಿದ್ದಲ್ಲದೆ ಆಸ್ಪತ್ರೆಯಲ್ಲೀಗ ಅನಾಥ ಶವ ಆಗುವಂತಾಗಿದೆ.