ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ l ಹಿಂದೂ ಹಿತರಕ್ಷಣೆ ಸಮಿತಿ ಸಂಚಾಲಕ ರತ್ನಾಕರ‌ ಅಮೀನ್ ಎಚ್ಚರಿಕೆ

ಕಾರ್ಕಳ : ಕರಾವಳಿಯು ಪರಶುರಾಮನ ಸೃಷ್ಟಿ, ಆದರೂ ಇಲ್ಲಿಯವರೆಗೆ ಕರಾವಳಿಯ ಯಾವುದೇ ಭಾಗದಲ್ಲೂ ಪರಶುರಾಮನ ಬಗೆಗಿನ ಇತಿಹಾಸವನ್ನು ಸಾರ್ವಜನಿಕರಿಗೆ ತೋರಿಸುವ ಯಾವುದೇ ಕಾರ್ಯಗಳು ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾ‌ರ್ ಅವರ ವಿಶಿಷ್ಟ ಕಲ್ಪನೆಯೇ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್. ಪ್ರವಾಸೋದ್ಯಮ ದೃಷ್ಟಿಕೋನದಲ್ಲಿ ಅಭಿವೃದ್ಧಿಪಡಿಸಿದ ಥೀಮ್ ಪಾರ್ಕ್‌ಗೆ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿರುವುದನ್ನು ಹಿಂದೂ ಹಿತರಕ್ಷಣಾ ಸಮಿತಿ ಖಡಾಖಂಡಿತವಾಗಿ ಖಂಡಿಸುತ್ತದೆ ಎಂದು ಸಮಿತಿಯ ಸಂಚಾಲಕ ರತ್ನಾಕ‌ರ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪರಶುರಾಮ ಥೀಮ್ ಪಾರ್ಕ್ ಇಡೀ ಕರಾವಳಿ ತೀರದ ಜನರ ಹೆಮ್ಮೆಯ ಯೋಜನೆ. ಈ ವಿಷಯದಲ್ಲಿ ಕ್ಷುಲ್ಲಕ ರಾಜಕೀಯ ಮಾಡಿ ಕಾಮಗಾರಿಗೆ ನೀವು ಅಡ್ಡಿಪಡಿಸಿದರೆ ಹಿಂದೂ ಹಿತರಕ್ಷಣಾ ವೇದಿಕೆ ಸುಮ್ಮನೆ ಕೂರುವುದಿಲ್ಲ. ಸಾಧ್ಯವಾದರೆ ನಿಮ್ಮದೇ ಸರಕಾರವಿದೆ, ನಿಮಗೆ ಸಂಪೂರ್ಣ ಅವಕಾಶವಿದೆ. ಇದನ್ನು ಬಳಸಿಕೊಂಡು ಬಾಕಿಯಿರುವ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಎಂದು ರತ್ನಾಕರ್ ಅಮೀನ್ ಆಗ್ರಹಿಸಿದ್ದಾರೆ.

ರಾಜಕೀಯ ಅವನತಿಯ ಆರಂಭ



































 
 

ಕಳೆದ ಒಂದು ವರ್ಷದಿಂದ ನಿಮ್ಮ ನಾಟಕ ನೋಡುತ್ತಾ ಇದ್ದೇವೆ. ಮೊದಲಿಗೆ ಮೂರ್ತಿಯನ್ನು ನಕಲಿ ಎಂದು ಹೇಳಿದ್ದೀರಿ, ನಂತರ ಪ್ಲಾಸ್ಟಿಕ್ ಎಂದಿರಿ, ಆಮೇಲೆ ಫೈಬ‌ರ್ ಎಂದಿರಿ ಮುಂದುವರೆಯುತ್ತಾ ಸೊಂಟದ ಮೇಲೆ ಮಾತ್ರ ಫೈಬರ್ ಎಂದಿರಿ. ಇದೀಗ ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಸರಿಯಿಲ್ಲ ಶಿಲ್ಪಿ ಸರಿಯಿಲ್ಲ ಎನ್ನುತ್ತಿದ್ದೀರಿ. ಕಾಮಗಾರಿ ಪುನರ್‌ ಆರಂಭಗೊಂಡಾಗ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ಹಾಕಿದಿರಿ. ಮರುದಿವಸ ಬೆಟ್ಟಕ್ಕೆ ಬೆಂಕಿ ಹಚ್ಚಿದಿರಿ. ತನ್ಮೂಲಕ ನಿಮಗೆ ನೀವೇ ಕೊಳ್ಳಿ ಇಟ್ಟುಕೊಂಡಿದ್ದೀರಿ. ಇದು ನಿಮ್ಮರಾಜಕೀಯ ಅವನತಿಯ ಆರಂಭ. ನಿಮ್ಮ ಇಂತಹ ನಾಟಕಗಳನ್ನು ಇನ್ನೂ ನೋಡುತ್ತಾ ಕೂರಲು ನಮ್ಮಿಂದ ಸಾಧ್ಯವಿಲ್ಲ ಎಂದು ರತ್ನಾಕರ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸವಾಲಾಗಿ ಸ್ವೀಕರಿಸುತ್ತೇವೆ

ಉದಯ್ ಕುಮಾರ್ ಶೆಟ್ಟಿಯವರೇ ಹೈಕೋರ್ಟ್‌ ಆದೇಶದಂತೆ ನಾಲ್ಕು ತಿಂಗಳ ಒಳಗೆ ನಿಮಗೆ ತಾಕತ್ ಇದ್ದರೆ ಕಾಮಗಾರಿ ಪೂರ್ಣಗೊಳಿಸಿ ಇಲ್ಲವೆಂದಾದರೆ ಸಾರ್ವಜನಿಕವಾಗಿ ಆಗುವುದಿಲ್ಲ ಎಂದು ಹೇಳಿಬಿಡಿ. ಇದನ್ನು ಹಿಂದು ಸಮಾಜಕ್ಕೆ ಸವಾಲೆಂದು ಸ್ವೀಕರಿಸಿ ನಾವು ಪೂರ್ಣಗೊಳಿಸುತ್ತೇವೆ. ಪರಶುರಾಮ ಥೀಮ್ ಪಾರ್ಕ್ ಇಡೀ ಹಿಂದೂ ಸಮಾಜದ ಗೌರವ ನೀವು ಹಿಂದೂ ಧಾರ್ಮಿಕ ಭಾವನೆಗೆ ಅಡ್ಡಿಪಡಿಸುತ್ತಿದ್ದೀರಿ. ಮುಂದೊಂದು ದಿನ ನಿಮಗೆ ಇಡೀ ಹಿಂದೂ ಸಮಾಜ ವಿರುದ್ಧವಾಗಿ ನಿಲ್ಲಲಿದೆ. ನಿಮ್ಮ ನೀಚ ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ ಎಂದು ರತ್ನಾಕ‌ರ್ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top