ಎರಡು ವರ್ಷದಲ್ಲಿ ಮುಗಿಸುವ ಸಲುವಾಗಿ ಜಾಗತಿಕ ಟೆಂಡರ್
ತಿರುಪತಿ: ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಚಿನ್ನದ ಲೇಪನದ ಕೆಲಸಕ್ಕಾಗಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಸಮಯದೊಳಗೆ ಚಿನ್ನದ ಲೇಪನ ಕಾರ್ಯ ಮುಗಿಯುವಂತಾಗಲು ಮತ್ತು ಯಾವುದೇ ವಿಳಂಬ ತಪ್ಪಿಸುವ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗುತ್ತದೆ ಎಂದು ಟಿಟಿಡಿ ಆಡಳಿತ ಮಾಹಿತಿ ನೀಡಿದೆ.
ಚಿನ್ನದ ಲೇಪನ ಕಾರ್ಯ ಗೋವಿಂದರಾಜ ಸ್ವಾಮಿ ಟೆಂಪಲ್ನಲ್ಲಿ ನಡೆಯಲಿದೆ. ತಿರುಮಲ ದೇಗುಲದಲ್ಲಿ ಈ ಸಮಯದಲ್ಲಿ ಸುಮಾರು ಎರಡು ವರ್ಷ ತಿರುಪತಿ ವೆಂಕಟೇಶ್ವರನ ಮೂಲ ಮೂರ್ತಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ದೊರಕುವುದಿಲ್ಲ. ಸದ್ಯ ಚಿನ್ನದ ಲೇಪನ ಮಾಡುವ ಕಾರ್ಯವನ್ನು ಮುಂದೂಡಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ತಿರುಮಲ ದೇಗುಲದಲ್ಲಿ ಚಿನ್ನದ ಲೇಪನ ಕಾರ್ಯ ಮಾಡಲು ಈ ಹಿಂದೆ ಉದ್ದೇಶಿಸಲಾಗಿತ್ತು. ಬಾಲಾಲಯಂನಲ್ಲಿ ತಿರುಪತಿ ತಿಮ್ಮಪ್ಪನ ತದ್ರೂಪಿ ಮೂರ್ತಿ ಪ್ರತಿಷ್ಠಾಪಿಸಿ ಅಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿತ್ತು.
ಇದಕ್ಕೂ ಮುನ್ನ 1958ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಆ ಸಮಯದಲ್ಲಿ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಬೇಕಾಗಿತ್ತು. ಕ್ರಿ.ಶ 839ರಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಮೊದಲ ಬಾರಿಗೆ ಚಿನ್ನದ ಲೇಪನವನ್ನು ಮಾಡಿಸಿದ್ದರು. ದಾಖಲೆಗಳ ಪ್ರಕಾರ ಅಂದಿನಿಂದ ಗೋಪುರದ ಚಿನ್ನದ ಲೇಪನವನ್ನು ಏಳು ಬಾರಿ ಬದಲಾಯಿಸಲಾಗಿದೆ.