ಕಾಣಿಯೂರು : ಪತಿಯ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರು ಗ್ರಾಮದ ಪಣ್ಚತ್ತಾರು ಸಮೀಪ ಉಪ್ಪಡ್ಕ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಉಪ್ಪಡ್ಕ ನಿವಾಸಿ ಪೂವಪ್ಪ ನಾಯ್ಕ ಎಂಬವರ ಪತ್ನಿ ಚಂದ್ರಾವತಿ (38) ಮೃತಪಟ್ಟವರು.
ಚಂದ್ರಾವತಿ ಅವರನ್ನು 16 ವರ್ಷದ ಹಿಂದೆ ಪೂವಪ್ಪ ನಾಯ್ಕ ಅವರು ಮದುವೆಯಾಗಿದ್ದರು. ದಂಪತಿಗೆ ಪ್ರಖ್ಯಾತ್ (15) ಹಾಗೂ ನಿಶಾಂತ್ (7) ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪೂವಪ್ಪ ನಾಯ್ಕ ಮದುವೆಯಾದ ಕೆಲವು ವರ್ಷಗಳ ಬಳಿಕ ಮದ್ಯ ವ್ಯಸನಿಯಾಗಿ, ಸರಿಯಾಗಿ ಕೂಲಿ ಕೆಲಸಕ್ಕೂ ಹೋಗದೆ, ಪತ್ನಿಯನ್ನೂ ಕೂಲಿ ಕೆಲಸ ಮಾಡಲು ಬಿಡದೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಸಂಬಂಧಿಕರು ಇವರಿಗೆ ಹಲವು ಬಾರಿ ಬುದ್ದಿವಾದ ಹೇಳಿದರೂ ಪ್ರಯೋಜನವಾಗಿರಲಿಲ್ಲ
ಮದ್ಯವರ್ಜನ ಶಿಬಿರ ಹಾಗೂ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರೂ ಕೆಲವು ತಿಂಗಳ ಕಾಲ ಮದ್ಯ ಸೇವನೆ ಬಿಟ್ಟು ಮತ್ತೆ ಪ್ರಾರಂಭಿಸುತ್ತಿದ್ದರು, ಚಂದ್ರಾವತಿಯವರಿಗೆ ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಗುರುವಾರ ಸಂಜೆ ಚಂದ್ರಾವತಿಯವರು ಬೆಂಗಳೂರಿನಲ್ಲಿರುವ ತನ್ನ ತಮ್ಮ ಪ್ರಶಾಂತನಿಗೆ ಮೊಬೈಲ್ ಸಂದೇಶ ರವಾನಿಸಿ ಪತಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದಾರೆ. ಇವರ ಜೊತೆ ಬದುಕಲು ನನಗೆ ಇಷ್ಟವಿಲ್ಲ, ನಾನು ಸಾಯುತ್ತೇನೆ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಪ್ರಶಾಂತ್‌ರವರಿಂದ ವಿಷಯ ತಿಳಿದು ಚಂದ್ರಾವತಿಯವರ ಇನ್ನೋರ್ವ ಸಹೋದರ ಸರ್ವೆ ನೆಕ್ಕಿತಡ್ಕ ಪ್ರವೀಣ್ ಎಂಬವರು ಉಪ್ಪಡ್ಕಕ್ಕೆ ಬಂದು ನೋಡಿದಾಗ ಚಂದ್ರಾವತಿಯವರು ಮನೆಯ ಪಕ್ಕದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತರ ಸಹೋದರ ನೆಕ್ಕಿತಡ್ಕ ಪ್ರವೀಣ್ ನೀಡಿದ ದೂರಿನಂತೆ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.