ಪುತ್ತೂರು: ವಿದ್ಯಾರ್ಥಿ ಮತ್ತು ಅಧ್ಯಾಪಕ ಪರಂಪರೆ ಬೆಳೆಯಬೇಕು. ಇಂದಿನ ವಿದ್ಯಾರ್ಥಿ ಸಮೂಹವೇ ನಮ್ಮ ದೇಶದ ಮುಂದಿನ ಭವಿಷ್ಯದ ರೂವಾರಿಗಳು ಆದ್ದರಿಂದ ನಾವೆಲ್ಲರು ಒಗ್ಗಟ್ಟಾಗಿ ಶ್ರಮಿಸಬೇಕು. ಪರಸ್ಪರ ಗೌರವ ಕೊಡುವುದನ್ನು ಬೆಳೆಸಿಕೊಳ್ಳೋಣ, ಎಲ್ಲರಲ್ಲೂ ಸಮಾನತೆ ಕಾಣುವ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್ ಧರ್ಮ ಹೇಳಿದರು.
ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ನಡೆದ ಸಪ್ತಪರ್ಣೊತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಚಿಂತನೆ, ಹೊಸ ಕಲ್ಪನೆಯೊಂದಿಗೆ ಹಳೆಯ ಆಚರಣೆಗಳು ಮುನ್ನಡೆಗೆ ಬರಬೇಕು. ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ. ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ವಿಶೇಷ ಚೈತನ್ಯ ಇವರಲ್ಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಇಂದು ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಿದ್ದಾರೆ. ನಮ್ಮ ಆಚರಣೆ, ಸಂಪ್ರದಾಯ, ಮತ್ತು ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀ ಕೃಷ್ಣ ಕೆ.ಎನ್ ಶುಭ ಹಾರೈಸಿದರು.
ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ,ಕ್ರೀಡಾಕೂಟಗಳಲ್ಲಿ ವಿಜೇತರಾದ ಮತ್ತು ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಸಂಘದ ವರದಿಯನ್ನು ವಿದ್ಯಾರ್ಥಿ ಪವನ್ ರಾಜ್ ವಾಚಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಗಣಪತಿ ಭಟ್, ಆಡಳಿತ ಮಂಡಳಿ ಖಜಾಂಜಿ ಎಂ.ಶ್ರೀನಿವಾಸ ಸಾಮಂತ, ಸದಸ್ಯರುಗಳಾದ ಜಗನ್ನಾಥ ಎ., ಶುಭ ಅಡಿಗ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್. ಜಿ ಶ್ರೀಧರ್, ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅನಿಶ್ ಎಮ್.ಎನ್ ವಂದಿಸಿದರು. ವಿದ್ಯಾರ್ಥಿನಿಯರಾದ ಸ್ವಾತಿ. ಎನ್., ಕೀರ್ತನಾ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.