ಪುತ್ತೂರು: ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಅಂಗವಾಗಿ ಬುಧವಾರ ಸಂಜೆ ಗ್ರಾಮಸ್ಥರಿಂದ ವೈಭವದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಸಂಜೆ 4 ಗಂಟೆಗೆ ಶಾಂತಿಮೊಗರು ದೇವಸ್ಥಾನದ ದ್ವಾರದ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ದೈವಸ್ಥಾನಕ್ಕೆ ಬಂದು ಸಮರ್ಪಣೆಯಾಯಿತು.
ಸಂಜೆ 6.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರ ದಿಕ್ಬಲಿ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.
ಮೇ 2 ಗುರುವಾರ ಸಂಜೆ 6.45 ಕ್ಕೆ ಗ್ರಾಮದೈವ ಇರ್ವೆರ್ ಉಳ್ಳಾಕುಲು, ಕೆಡೆಂಜೊಡಿತ್ತಾಯ, ವ್ಯಾಘ್ರ ಚಾಮುಂಡಿ ದೈವಗಳ ಭಂಡಾರ ತೆಗೆದು ರಾತ್ರಿ 8 ಕ್ಕೆ ಅನ್ನಸಂತರ್ಪಣೆ ಜರಗಿತು. 9 ರಿಂದ ದೈವಗಳ ನೇಮೋತ್ಸವ ನಡೆದು ಇಂದು ಮುಂಜಾನೆ ತನಕ ನಡೆದು ಬಳಿಕ ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಖಜಾಂಚಿ ಶೈಲಶ್ರೀ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪ್ರಮುಖರಾದ ಕೆಡೆಂಜಿಗುತ್ತು ದಿನೇಶ್ ಕುಮಾರ್, ಕೆಡೆಂಜಿಗುತ್ತು ಶಕುಂತಳಾ ಗೋಪಾಲ್ ಪೂಜಾರಿ, ಕೆಡೆಂಜಿಗುತ್ತು ಜಯಂತಿ, ಕೆಡೆಂಜಿಗುತ್ತು ದಿನಮಣಿ ನಿತಿನ್ ಚಂದ್ರ, ಕೆಡೆಂಜಿಗುತ್ತು ವಸುಧಾ ಶಶಿಧರ್, ಊರವರು ಉಪಸ್ಥಿತರಿದ್ದರು.