ಮಂಗಳೂರು : ನಗರದ ಹೊರವಲಯದ ಅಡ್ಯಾರ್ ಬೊಂಡಾ ಫ್ಯಾಕ್ಟರಿಯಿಂದ ಖರೀದಿಸಿದ ಎಳನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಯು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿರುವ ಎಳನೀರು ಸ್ಯಾಂಪಲ್‌ನ ಪರೀಕ್ಷಾ ವರದಿ ಹೊರ ಬಂದಿದ್ದು, ವಿಷಕಾರಿ ಅಂಶವಿಲ್ಲ ಎನ್ನುವುದು ವರದಿಯಿಂದ ತಿಳಿದು ಬಂದಿದೆ.
ಎ.8ರಂದು ಬೊಂಡ ಫ್ಯಾಕ್ಟರಿಯಿಂದ ಖರೀದಿಸಲಾದ ಎಳನೀರು ಸೇವಿಸಿದ 138 ಮಂದಿ ಮರುದಿನ ಅನಾರೋಗ್ಯಕ್ಕೆ ಒಳಗಾಗಿ ಜಿಲ್ಲೆಯ ಹಲವು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಈ ಪ್ರಕರಣ ಗಮನಕ್ಕೆ ಬಂದ ಹಿನ್ನಲ್ಲೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಪ್ರಯೋಗಾಲಯ ಪರೀಕ್ಷೆಯ ವರದಿ ಇದೀಗ ಆರೋಗ್ಯ ಇಲಾಖೆಯ ಕೈ ಸೇರಿದೆ. ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಘಟನೆಯ ಬಳಿಕ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿತ್ತು. ಮುಂದೆ ಬೊಂಡ ಫ್ಯಾಕ್ಟರಿಯಲ್ಲಿ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಪಾಲನೆಗೆ ಆಹಾರ ಸುರಕ್ಷಾ ಅಫಿಡಾವಿಟ್‌ನ್ನು ಫ್ಯಾಕ್ಟರಿ ಮಾಲಕರಿಂದ ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ