ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 542 ಕೋಟಿ ರೂ. ವ್ಯವಹಾರ ಮಾಡಿ, ಶೇ.99.12 ಸಾಲ ವಸೂಲಾತಿ ಮಾಡಿದೆ. 1.50 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸತತ 2ನೇ ಭಾರಿ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ ಪುರಸ್ಕೃತಗೊಂಡ ಸಂಘ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ 2002 ರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಆರಂಭಗೊಂಡು ಪ್ರಸ್ತುತ ಎಪಿಎಂಸಿ ರಸ್ತೆಯಲ್ಲಿರುವ ಮೊನಾರ್ಚ್ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಪುತ್ತೂರು ಎಪಿಎಂಸಿ ರಸ್ತೆ ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಅಲಂಕಾರು, ಪುತ್ತೂರು ಎಸ್‌ಎಮ್‌ಟಿ, ಕಾಣಿಯೂರು ಮತ್ತು ಬೆಳ್ಳಾರೆ ಶಾಖೆಯನ್ನು ಹೊಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಗ್ರಗಣ್ಯ ಕ್ರೆಡಿಟ್ ಸೊಸೈಟಿಗಳಲ್ಲೊಂದಾಗಿ ಸಂಘವು 2023-24ನೇ ಸಾಲಿನಲ್ಲಿ 542 ಕೋಟಿ ವ್ಯವಹಾರ ಮಾಡಿ 2022 -23ನೇ ಸಾಲಿಗಿಂತ 142 ಕೋಟಿ ಪ್ರಗತಿಯನ್ನು ಸಾಧಿಸಿದೆ.
ಪ್ರಸ್ತುತ ಸಾಲಿನಲ್ಲಿ ಸುಮಾರು ರೂ. 77 ಕೋಟಿ ಸಾಲ ನೀಡಿ ಶೇ.99.12 ಸಾಲ ವಸೂಲಾತಿ ಮಾಡಿದೆ. ಸಂಘವು ವರ್ಷಾಂತ್ಯಕ್ಕೆ 1.50 ಕೋಟಿ ಲಾಭಾಂಶ ಪಡೆದು ತನ್ನ ಎಲ್ಲಾ ಕಾರ್ಯ ವೈಖರಿಯಲ್ಲಿ ಗುರಿ ಮೀರಿದ ಪ್ರಗತಿಯನ್ನು ಮಾಡಿದೆ. ಠೇವಣಾತಿ ಮತ್ತು ಸಾಲದಲ್ಲಿ 22-23ನೇ ಸಾಲಿಗಿಂತ 23-24ನೇ ಸಾಲಿನಲ್ಲಿ ಶೇ. 36 ರಷ್ಟು ಪ್ರಗತಿಯನ್ನು ಸಾಧಿಸಿದೆ. ಸಂಘವು ಒಟ್ಟು ಸುಮಾರು 7ಸಾವಿರ ಸದಸ್ಯರನ್ನು ಹೊಂದಿದ್ದು, ಒಟ್ಟು ವರ್ಷಾಂತ್ಯಕ್ಕೆ 104 ಕೋಟಿ ಠೇವಣಿ ಮತ್ತು 99 ಕೋಟಿ ಸಾಲ ಹೊಂದಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಹೊಂದಿಸುವ ದೃಷ್ಟಿಯಿಂದ 10ನೇ ಶಾಖೆಯನ್ನು ವಿಟ್ಲದಲ್ಲಿ ಶೀಘ್ರದಲ್ಲಿ ತೆರೆಯುವುದಾಗಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಸಂಘದ ಎಲ್ಲಾ ಶಾಖೆಗಳಲ್ಲಿ ಹವಾನಿಯಂತ್ರಣ ಮತ್ತು ಸಿಸಿ ಕ್ಯಾಮರ ಅಳವಡಿಸಲಾಗಿದೆ. ಶಾಖೆಗಳಲ್ಲಿ ಸಿಬ್ಬಂದಿಗಳ ನಗುಮುಖದ ಮತ್ತು ಶೀಘ್ರ ಸೇವೆಗಳನ್ನು ನೀಡಲಾಗಿದ್ದು, ವಿವಿಧ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡಾಗುತ್ತದೆ. ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಲಗಾರ ಸದಸ್ಯರುಗಳ ಸಹಕಾರ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಸಲಹಾ ಸಮಿತಿ ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯದಕ್ಷತೆಯಿಂದ ಸಾಧನೆಯನ್ನು ಮಾಡಿದೆ. ಮುಂದೆಯೊ ಇನ್ನಷ್ಟು ಪ್ರಗತಿ ಪಥದಲ್ಲಿ ಮುನ್ನಡೆಸಲು ಸಹಕಾರ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಜೊತೆಗಿದ್ದರು.