ಪುತ್ತೂರು: ಸಮಾಜಕ್ಕೆ ಹಲವಾರು ಕೊಡುಗೆಯನ್ನು ನೀಡುತ್ತಾ ಬಂದಿರುವ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನೂತನವಾಗಿ ಕಲ್ಲಾರೆಯಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.24 ರಂದು ಸಂಜೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಜೆ 6.30 ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಲೋಕಾರ್ಪಣೆ ನಡೆಯಲಿದೆ ಎಂದು ಹೇಳಿದರು.
ಸಂಘ ದತ್ತಿ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿಕೊಂಡು ಅರ್ಹ ವಿದ್ಯಾರ್ಥಿಗಳಿಗೆ ಸಹಾಯ, ಪುತ್ತೂರಿನ ಕಲ್ಲಾರೆಯಲ್ಲಿ ಒಂದು ಎಕ್ರೆ ಜಮೀನು, ಅಂಗಡಿಗಳು ಹೊಂದಿರುವುದು ಸಕ್ರೀಯ ಸದಸ್ಯರ ಶ್ರಮ ಮತ್ತು ಸಾಧನೆಯ ಪ್ರತೀಕವಾಗಿದೆ. ಸದ್ಯ ಸುಮಾರು 7ಸಾವಿರ ಚದರ ಅಡಿಯಲ್ಲಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯನ್ನೊಳಗೊಂಡ ಸಭಾಭವನದಲ್ಲಿ ಸುಮಾರು 700-800 ಮಂದಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಶೃಂಗೇರಿ ಶ್ರೀಗಳ ಸ್ವಾಗತ ಮಾಡಿಕೊಂಡು, ಧೂಳೀ ಪಾದಪೂಜೆ, ಕಟ್ಟಡ ನಿರ್ಮಾಣದ ಕರ್ತೃಗಳಿಗೆ ಸಂಮಾನ, ಆಶೀರ್ವಚನ, ಫಲ ಸಮರ್ಪಣೆ, ಮಂತ್ರಾಕ್ಷತೆಯ ಬಳಿಕ ಅಂಬಿಕಾ ವಿದ್ಯಾಲಯಕ್ಕೆ ತೆರಳಲಿದ್ದಾರೆ. ಏ.25 ರಂದು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ವೆಂಕಟ್ರಮಣ ದೇವಸ್ಥಾನದ ಬೇಟಿಯನ್ನು ಶ್ರೀಗಳು ನಡೆಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ., ಕಾರ್ಯದರ್ಶಿ ಎ. ಬಾಲಕೃಷ್ಣ ರಾವ್, ಕೋಶಾಧಿಕಾರಿ ಎನ್.ಎಸ್. ನಟರಾಜ ಉಪಸ್ಥಿತರಿದ್ದರು.