ಪುತ್ತೂರು: ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಘಟನೆಯ ನೈತಿಕ ಹೊಣೆ ಹೊತ್ತುರಾಜ್ಯ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತಾಂಧನಾದ ಫಯಾಝ್ ಎಂಬ ವ್ಯಕ್ತಿ ಪ್ರೀತಿಯ ನಾಟಕ ಮಾಡಿ ನೇಹಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಮತಾಂಧ ವ್ಯಕ್ತಿ ಯತ್ನಿಸಿದ್ದಾನೆ. ತನ್ನದೇ ಪಕ್ಷದ ನಾಯಕನ ಮಗಳಿಗೆ ರಕ್ಷಣೆ ನೀಡಲಾಗದ ಕಾಂಗ್ರೆಸ್ ಸರಕಾರ ರಾಜ್ಯದ ಜನಸಾಮಾನ್ಯರಿಗೆ ರಕ್ಷಣೆ ನೀಡಿತೇ ಎಂದು ಪ್ರಶ್ನಿಸಿದರು.
ವಿಧಾನಸೌಧದ ಬಳಿ ಪಾಕ್ ಪರ ಘೋಷಣೆ ಕೂಗಿದಾಗ, ಹನುಮಾನ್ ಚಾಲೀಸ್ ಪಠಿಸಿದಾತನ ಮೇಲೆ ಹಲ್ಲೆ ನಡೆದಾಗ, ಜೈಶ್ರೀರಾಮ್ ಘೋಷಣೆ ಮಾಡಿದಾಗ ರಾಜ್ಯ ಸರಕಾರ ಮೃದು ಧೋರಣೆ ತಳೆದಿರುವುದೇ ಇಂತಹ ಸಮಾಜ ದ್ರೋಹಿ ಚಟುವಟಿಕೆಗಳು ನಡೆಯಲು ಪ್ರೇರಣೆ. ಅಪರಾಧ ಮಾಡುವ ಜಿಹಾದಿ ಮಾನಸಿಕತೆಗಳಿಗೆ ಏನೂ ಮಾಡಿದರೂ ನಡೆಯುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪುತ್ತೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಚುನಾವಣಾ ಕಾರ್ಯದ ನಿಮಿತ್ತ ಮನೆ ಭೇಟಿ ಮಾಡಿದಾಗ ಅವರ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ ಮಾಡುವ ಯತ್ನ ನಡೆದಿದೆ. ಇದೆಲ್ಲ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರು ಅತ್ಯಂತ ದುರ್ಬಲ ಸಚಿವರಾಗಿದ್ದಾರೆ. ಹುಬ್ಬಳ್ಳಿ ಘಟನೆಯ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಮಠಂದೂರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಭಟ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಮುಖಂಡ ಅರುಣ್ ಪುತ್ತಿಲ ಉಪಸ್ಥಿತರಿದ್ದರು.