ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಲ್ಕಾರು ಎಂಬಲ್ಲಿ ಕಲ್ಕಾರು ಕುಟುಂಬಸ್ಕರ ನೂತನವಾಗಿ ನಿರ್ಮಿಸಿರುವ ಚಿತ್ರಕೂಟದಲ್ಲಿ ನಾಗದೇವರು ದೈವಸ್ಥಾನಗಳಲ್ಲಿ ಶ್ರೀ ಮಹಮ್ಮಾಯ ಅಮ್ಮನವರು, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಏ.21 ಭಾನುವಾರ ಬೆಳಿಗ್ಗೆ 9.45 ರಿಂದ 10.25 ರ ಮಿಥುನ ಲಗ್ನದಲ್ಲಿ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ದಿವ್ಯ ಹಸ್ತದಲ್ಲಿ ಜರಗಲಿದೆ ಎಂದು ಕಲ್ಕಾರು ದೈವ ದೇವರುಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 30 ವರ್ಷಗಳ ಹಿಂದೆ ಬಾಲಕೃಷ್ಣ ರೈ ಚೊಕ್ಕಾಡಿ ಅವರ ಮುಂದಾಳುತ್ವದಲ್ಲಿ ಕುಟುಂಬದ ಹಿರಿಯರಾದ ದುಗ್ಗಪ್ಪ ಶೆಟ್ಟಿ ಕೆಂಜಿಲ, ಶಿವಪ್ಪ ಶೆಟ್ಟಿ ಎಲವರಬಾವ, ಜತ್ತಪ್ಪ ಆಳ್ವ ಕಲ್ಕಾರು, ನಾರಾಯಾಣ ಅಡ್ಯಂತಾಯ , ಧರ್ಮಣ್ಣ ಶೆಟ್ಟಿ ಹಂಕರ್ಜಾಲು ಮತ್ತು ಕುಟುಂಬದ ಸದಸ್ಯರು ಸೇರಿಕೊಂಡು ಪಯ್ಯನೂರು ಮಾಧವ ಪೊದುವಾಳದ ನೇತೃ5ತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿ ಕಲ್ಕಾರಿನಲ್ಲಿ ಕುಟುಂಬದ ದೈವಗಳನ್ನು ಮತ್ತು ನಾಗ ದೇವರನ್ನು ಆರಾಧಿಸಬೇಕು ಎಂದು ಕಂಡು ಬಂದ ಪ್ರಕಾರ ಕಲ್ಕಾರು ಲಕ್ಷ್ಮೀ ಸಿ. ಶೆಟ್ಟಿ ಮತ್ತು ಮಕ್ಕಳು, ನಾರಾಯಣ ಅಡ್ಯಂತಾಯ ಮತ್ತು ಸಹೋದರರು, ಕೃಷ್ಣ ಅಡಪ ಅವರು ದಾನವಾಗಿ ನೀಡಿದ ಜಾಗದಲ್ಲಿ 1994 ರಲ್ಲಿ ದೈವಸ್ಥಾನ ಮತ್ತು ನಾಗಬನ ನಿರ್ಮಾಣ ಮಾಡಿ ಬ್ರಹ್ಮಕಲಶವನ್ನು ನೆರವೇರಿಸಲಾಯಿತು. 2002 ರಿಂದ ಕುಟುಂಬದ ಕಾರ್ಯಕಾರಿ ಸಮಿತಿಯ ಜವಾಬ್ದಾರಿ ವಹಿಸಿಕೊಂಡ ಕೆ.ಸೀತಾರಾಮ ರೈ ಸವಣೂರುರವರು ಕುಟುಂಬಿಕರ ಸಹಕಾರದಿಂದ ಹೊಸ ತರವಾಡು ಮನೆ, ರಂಗ ಮಂಟಪ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಈ ವರ್ಷ ದೈವಗಳ ಪ್ರೇರಣೆಯಂತೆ ದೈವಸ್ಥಾನ ಮತ್ತು ನಾಗದೇವರ ಸಾನಿಧ್ಯವನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಕುಟುಂಬದ ಹಿರಿಯರಾದ ಸೀತಾರಾಮ ಅಡ್ಯಂತಾಯ ಬೋಳಂತ್ತೂರು ಗುತ್ತು, ವೆಂಕಪ್ಪ ಆಳ್ವ ಕುರಿಯ, ವಾಸುದೇವ ಶೆಟ್ಟಿ ಪಲ್ಲತಡ್ಕ, ಪದ್ಮನಾಭ ಕಾಜವ ಕೆಂಜಿಲ, ಕೃಷ್ಣ ಶೆಟ್ಟಿ ಕನಡ್ತ್ಯಾರು, ಸದಾಶಿವ ಆಳ್ವ ಬಾಳೆಪುಣಿಗುತ್ತು, ಶ್ರೀಧರ ಶೆಟ್ಟಿ ಹಿನಾರಿ ಹಾಗೂ ಕುಟುಂಬಿಕರನ್ನು ಒಟ್ಟು ಸೇರಿಸಿ ದೈವ ದೇವೆರ ಜೀರ್ಣೋದ್ಧಾರ ಕೆಲಸ ಮಾಡುವ ಬಗ್ಗೆ ತೀರ್ಮಾನ ಕೈಗೊಂಡು, ಪಯ್ಯನೂರು ಮಾಧವ ಪೊದುವಾಳರ ಮೂಲಕ ತಾಂಬೂಲ ಪುನಃ ಪ್ರಶ್ನಾ ಚಿಂತನೆಯನ್ನು ನಡೆಸಿ ನೂತನ ದೈವಸ್ಥಾನದ ಕೆಲಸ ಆರಂಭಿಸಲಾಯಿತು ಎಂದು ಅವರು ತಿಳಿಸಿದರು.
ಕೇವಲ 37 ದಿನಗಳಲ್ಲಿ ದೈವಸ್ಥಾನ ಮತ್ತು ನಾಗದೇವರ ಚಿತ್ರಕೂಟದ ಕೆಲಸ ಕಾರ್ಯಗಳು ಪೂರ್ಣಗೊಂಡು 2024ನೇ ಏ.19 ರಿಂದ ವಿವಿಧ ದೇವತಾ ಕಾರ್ಯಕ್ರಮಗಳು ಪ್ರಾರಂಭಗೊಂಡು ಏ.21 ರಂದು ದೈವ ದೇವರುಗಳ ಪ್ರತಿಷ್ಠಾ ಬ್ರಹ್ಮಕಲಶ ನಡೆಯಲಿದೆ. ಅಲ್ಲದೆ ಮಧ್ಯಾಹ್ನ 12 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭೆಯಲ್ಲಿ ಶ್ರೀ ವಿನಯ ಗುರೂಜಿ ಗೌರಿಗದ್ದೆ ಅವರ ದಿವ್ಯ ಉಪಸ್ಥಿತಿಯಿರಲಿದ್ದು, ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ “ಶ್ರೀರಾಮ ಪರಂದಾಮ” ಪ್ರದರ್ಶನಗೊಳ್ಳಲಿದೆ. ಸಂಜೆ 6 ರಿಂದ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಟುಂಬಿಕರಾದ ದೇವರಾಜ್ ರೈ ಸುರಿಬೈಲು, ವಿಶ್ವನಾಥ ಆಳ್ವ ನಾಡಾಜೆ, ರಾಧಾಕೃಷ್ಣ ಅಡ್ಯಂತಾಯ ಕಲ್ಕಾರು, ಪುಷ್ಪರಾಜ್ ಅಡ್ಯಂತಾಯ ಕಲ್ಕಾರು, ರತ್ನಾಕರ ಅಡಪ ಕಲ್ಕಾರು, ರವಿ ರೈ ಕಳಸ, ಸುಧಾಕರ ಶೆಟ್ಟಿ ನಾಡಾಜೆ, ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು ಉಪಸ್ಥಿತರಿದ್ದರು.