ಬೆಳ್ತಂಗಡಿ : ನಾವು ಯಾರನ್ನೂ ದ್ವೇಷಿಸಿಲ್ಲ. ಪ್ರೀತಿಯಿಂದಲೇ ಜನರ ಬಳಿಗೆ ಹೋಗಿದ್ದೇವೆ. ಹಾಗಾಗಿ ಮುವತ್ತ್ಮೂರು ವರ್ಷಗಳ ಸರಪಳಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುರಿಯಲಿದೆ. ಕಾಂಗ್ರೆಸ್ ಜಿಲ್ಲೆಯಲ್ಲಿ ಗೆಲುವು ಪಡೆಯುವುದು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಗರ ಹಾಗೂ ಗ್ರಾಮೀಣ ಘಟಕದ ಮುಖಂಡರು, ಕಾರ್ಯಕರ್ತರ ಸಭೆ ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಹಿಂದುಳಿದ ವರ್ಗದ ಸಮುದಾಯಗಳ ಸಭೆಯನ್ನು ಮಂಗಳೂರಿನಲ್ಲಿ ಕರೆದಿದ್ದೇವು. ಎಲ್ಲಾ ಸಮುದಾಯದ ಮುಖಂಡರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆ ಕರೆಯಲಾಗುವುದು ಎಂದರು.
ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷಣೆಯನ್ನು ಕೇಳಿ ಅದರ ಹಿಂದೆ ಹೋದರೆ, ಬೆಕ್ಕಿನ ಹಿಂದೆ ಹೋದ ಇಲಿಯಂತಾಗುತ್ತದೆ. ಆದ್ದರಿಂದ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಲು ಶ್ರಮಿಸಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಬಿಜೆಪಿಯ ಒಟ್ಟು ಸೀಟುಗಳ ಅಭ್ಯರ್ಥಿಗಳನ್ನು ಗಮನಿಸಿದರೆ, ಪ್ರಾತಿನಿಧ್ಯ ಇಲ್ಲದವರ ಧ್ವನಿಯೇ ಇಲ್ಲ. ಅಂದರೆ ನಿಮ್ಮ ಕೂಗಿಗೆ, ನಿಮ್ಮ ಬೇಡಿಕೆಗೆ ಬೆಲೆಯೇ ಇಲ್ಲ. ಆದ್ದರಿಂದ ಹಿಂದುಳಿದ ವರ್ಗದ ಧ್ವನಿಯಾಗಿ, ಬಡವರ ಧ್ವನಿಯಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಶೇಖರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಧರ್ಣೇಂದ್ರ ಕುಮಾರ್, ಮಹಿಳಾ ಘಟಕ ಗ್ರಾಮೀಣ ಅಧ್ಯಕ್ಷೆ ನಮಿತಾ, ಅಲ್ಪಸಂಖ್ಯಾತ ಘಟಕದ ಗ್ರಾಮೀಣ ಅಧ್ಯಕ್ಷ ಜೈಸನ್ ಪಟ್ಟೇರಿ, ಸುಭಾಶ್ಚಂದ್ರ ರೈ, ನಗರ ಪಂಚಾಯತ್ ಸದಸ್ಯ ಜಗದೀಶ್ ಬಿ., ಜಿಲ್ಲಾ ಧಾರ್ಮಿಕ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ಅಲ್ಪಸಂಖ್ಯಾತ ನಗರ ಅಧ್ಯಕ್ಷ ಕರೀಂ ಗೇರುಕಟ್ಟೆ, ಶಿರೋ ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯ ಅಧ್ಯಕ್ಷ, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವೀಟ್ಟಿ ಬಿ. ನೆಡುನೆಲಂ ಮೊದಲಾದವರು ಉಪಸ್ಥಿತರಿದ್ದರು.