ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಶುಕ್ರವಾರ ಪುತ್ತೂರು ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಮಹಾಬಲ ರೈ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಕ್ಷೇತ್ರ ಯೋಜನಾಧಿಕಾರಿ ಶಶಿಧರ್ ಎಂ. ಹಾಗೂ ಜನಜಾಗೃತಿ ವಲಯಧ್ಯಕ್ಷರು, ಒಕ್ಕೂಟ ವಲಯಧ್ಯಕ್ಷರು ಹಾಗೂ ತಾಲೂಕು ಜನಜಾಗೃತಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮದ್ಯಮುಕ್ತ ಚುನಾವಣೆಯನ್ನು ನಡೆಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮದ್ಯಮುಕ್ತ ಚುನಾವಣೆಯ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕರಪತ್ರದ ಕುರಿತು ಮಾಹಿತಿ ನೀಡಿದರು. ಜನಜಾಗೃತಿ ವತಿಯಿಂದ ನಡೆಸುವ ಕಾಯ೯ಕ್ರಮಗಳ ಬಗ್ಗೆ 2024-2025 ನೇ ಸಾಲಿನ ಕ್ರಿಯಾ ಯೋಜನೆಯ ಬಗ್ಗೆ ಚಚಿ೯ಸಲಾಯಿತು.