ಪುತ್ತೂರು: ಕುಡಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂದಡ್ಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ನಿನ್ನೆ(ಬುಧವಾರ)ಯಷ್ಟೇ ಬೋರ್ ವೆಲ್ ಪಂಪ್ ಹಾಳಾಗಿದ್ದು, ನಾಳೆ(ಶುಕ್ರವಾರ) ಪಂಪ್ ಅಳವಡಿಕೆ ಮಾಡಲಾಗುವುದು. ತಕ್ಷಣವೇ ನೀರು ಸರಬರಾಜು ಆಗಲಿದೆ ಎಂದು ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿ ತಿಳಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಗಿಮಿಕ್ ಗಳನ್ನು ಮಾಡಲು ಕೆಲವರು ಮುಂದಾಗುತ್ತಾರೆ. ಅಲ್ಲಿ ನೀರಿನ ಕೊರತೆ ಇಲ್ಲದೇ ಇದ್ದರೂ, ಅನಾವಶ್ಯಕವಾಗಿ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ನೀರು ನೀಡಲಾಗುತ್ತಿದೆ. ಬಳಿಕ ಅದನ್ನು ಫೊಟೋ ತೆಗೆದು, ಪ್ರಚಾರ ತೆಗೆದುಕೊಳ್ಳುವ ಪ್ರಯತ್ನವಷ್ಟೇ ಇದು.
ಕುಡಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪಂಪ್ ಕೆಟ್ಟು ಹೋಯಿತು ಅಂದಾಕ್ಷಣ, ರಿಪೇರಿಗೆ ವ್ಯವಸ್ಥೆ ಮಾಡಿದ್ದೇವೆ. ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಗ್ರಾ.ಪಂ. ಸಿದ್ಧವಾಗಿದೆ ಎಂದು ರೇಖಾ ಬಟ್ರುಪ್ಪಾಡಿ ಹೇಳಿಕೆ ನೀಡಿದ್ದಾರೆ.
ಕ್ರಷರ್ ಪಕ್ಕವೇ ನೀರಿದೆ:
ಕಲ್ಲಂದಡ್ಕದ ನಿವಾಸಿಗಳನ್ನು ಭೇಟಿಯಾಗಿರುವ ಬಗ್ಗೆ ತಿಳಿಸಿರುವ ರೇಖಾ ಬಟ್ರುಪ್ಪಾಡಿ, ಅಲ್ಲಿನ ಜನರು ಪಕ್ಕದ ಕ್ರಷರಿನಿಂದ ನೀರು ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಕಲ್ಲಂದಡ್ಕದಲ್ಲಿ ಇಲ್ಲ. ಸುಮ್ಮನೆ ಚುನಾವಣಾ ಗಿಮಿಕಿನ ಭಾಗವಾಗಿ ಟ್ಯಾಂಕರಿನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.