ಮಂಗಳೂರು: ಕರಾವಳಿಯಲ್ಲಿ ಕೋಳಿ ಮಾಂಸ ಸೇವಿಸುವವರಿಗೂ ಉಷ್ಣಾಂಶ ಹೆಚ್ಚಳದ ಬಿಸಿ ತಟ್ಟಿದೆ. ಉಷ್ಣಾಂಶ ಹೆಚ್ಚಳದಿಂದ ಫಾರಂಗಳಲ್ಲಿ ಕೋಳಿಗಳು ಅನಿರೀಕ್ಷಿತವಾಗಿ ಸಾವಿಗೀಡಾಗುತ್ತಿದ್ದು ಕೋಳಿ ಮಾಂಸದ ಧಾರಣೆ ಮೂರು ನಾಲ್ಕು ದಿನಗಳಲ್ಲಿ ಪ್ರತಿ ಕೆ.ಜಿ.ಗೆ ರೂ. 40ರಿಂದ ರೂ.50ರವರೆಗೆ ಜಾಸ್ತಿ ಆಗಿದೆ.
ನಾಲ್ಕು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ರೂ. 220 ಇದ್ದ ಕೋಳಿಮಾಂಸದ ದರ ಈಗ ರೂ. 270ಕ್ಕೆ ಹೆಚ್ಚಳವಾಗಿದೆ. ಚರ್ಮಸಹಿತ ಕೋಳಿ ಮಾಂಸದ ಧಾರಣೆ ಕೆ.ಜಿ.ಗೆ ರೂ. 190 ಇದ್ದುದು ಈಗ ರೂ.240ಕ್ಕೆ ಏರಿಕೆಯಾಗಿದೆ. ಜೀವಂತ ಬ್ರಾಯ್ಲರ್ ಕೋಳಿಯ ದರವು ಪ್ರತಿ ಕೆ.ಜಿ.ಗೆ ರೂ. 130 ಇದ್ದುದು ರೂ.170ರಿಂದ ರೂ. 180ಕ್ಕೆ ಹೆಚ್ಚಳವಾಗಿದೆ’ ಎಂದು ನಗರದ ಐಡಿಯಲ್ ಚಿಕನ್ ನಜೀರ್ ತಿಳಿಸಿದ್ದಾರೆ.
ವಾರದಿಂದ ಈಚೆಗೆ ದಿನದಿಂದ ದಿನಕ್ಕೆ ದರ ಹೆಚ್ಚಳವಾಗುತ್ತಲೇ ಸಾಗುತ್ತಿದ್ದು ಬೇಡಿಕೆ ಇರುವಷ್ಟು ಕೋಳಿಗಳು ಪೂರೈಕೆ ಆಗುತ್ತಿಲ್ಲ.
ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ವಾತಾವರಣದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉಷ್ಣಾಂಶ ಹೆಚ್ಚಳದಿಂದ ಸಾಯುತ್ತಿರುವ ಕೋಳಿಗಳನ್ನು ಉಳಿಸಿಕೊಳ್ಳಲು ಕೋಳಿ ಫಾರ್ಮ್ ಮಾಲೀಕರು ಹರಸಾಹಸಪಡುತ್ತಿದ್ದು ಕೆಲವರು ಕೋಳಿ ಸಾಕುವುದನ್ನೇ ನಿಲ್ಲಿಸುವ ಹಂತಕ್ಕೆ ತಲುಪಿದ್ದಾರೆ ಎನ್ನಲಾಗುತ್ತಿದೆ.