ಬೆಂಗಳೂರು: ಮುಖ್ಯಮಂತ್ರಿಗೆ ಹಾರ ಹಾಕಿದ ಘಟನೆಯಲ್ಲಿ ಪಿಸ್ತೂಲು ಹಿಡಿದುಕೊಂಡ ಸೆಕ್ಯೂರಿಟಿ ವೈಫಲ್ಯ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.
ನನ್ನ ಜೊತೆನೂ ಗನ್ ಮ್ಯಾನ್‌ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಪೊಲೀಸರ ಮುಂದೆ ರಿಯಾಜ್ ನನಗೆ ಜೀವ ಬೆದರಿಕೆ ಇದೆ. ಹೀಗಾಗಿ ಪ್ರತಿ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆ. ಸಿಎಂ ಮುಂದೆ ಗನ್ ಪ್ರದರ್ಶನ ಮಾಡಬೇಕು ಎಂಬ ಉದ್ದೇಶ ನನಗಿರಲಿಲ್ಲ.
ನಮ್ಮದೇವರಾಜ್ ಸಾಹೇಬ್ರು ಮೇಲೆ ಬಾ ಅಂದ್ರು. ಹೀಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕಿದೆ. ಅವರು ಕರೆಯದಿದ್ದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. . ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ಶೋ ಮಾಡಿಲ್ಲ ಎಂದು ರಿಯಾಜ್ ಪೊಲೀಸರ ಮುಂದೆ ಹೇಳಿದ್ದು, ರಿಯಾಜ್ ಹೇಳಿಕೆಯನ್ನು ಸಿದ್ದಾಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ.