ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ಕುರಿತು ದೂರುಗಳು ಬರುತ್ತಿದ್ದು, ಅತಿ ಹೆಚ್ಚಿನ ದೂರು ಬರುತ್ತಿದ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮರ ಮೂಲಕ ಕಣ್ಣಿಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ 30 ಕಡೆಗಳಲ್ಲಿ ಇಲಾಖೆಯು ಸೋಲಾರ್ ವಿದ್ಯುತ್ ಆಧಾರಿತ ಸಿಸಿ ಕ್ಯಾಮರಗಳನ್ನು ಅಳವಡಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ 4 ಕಡೆ ಹಾಗೂ ಉಳಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ 26 ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ/ಸಾಗಾಟದ ಕುರಿತು ಗಣಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಒಂದು ಕಂಬವನ್ನು ಅಳವಡಿಸಿ ಅದರ ಮೇಲೆ ಪೆಟ್ಟಿಗೆಯ ಒಳಭಾಗದಲ್ಲಿ ಕ್ಯಾಮರ ಅಳವಡಿಸಿ ಪೆಟ್ಟಿಗೆಯ ಮೇಲ್ಬಾಗದಲ್ಲಿ ಸೋಲಾರ್ ಪ್ಯಾನಲ್ ಇಡಲಾಗಿದೆ. ಕ್ಯಾಮರಾಗಳ ದೃಶ್ಯದ ಮೇಲೆ ಇಲಾಖೆ ನಿರಂತರ ನಿಗಾ ಇಡಲಿದ್ದು, ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಲಾರಿಯ ನಂಬರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪುದುವಿನ ದೇವರಪಾಲು, ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ, ಸಜೀಪನಡುವಿನ ಮಿತ್ತಪಡು ಸರ್ಕಲ್ ಕೋಟೆಕಣಿ, ನೇತ್ರಾವತಿ ನದಿ ಕಿನಾರೆ ಜುಮಾ ಮಸೀದಿ ಬಳಿ ಕ್ಯಾಮರ ಅಳವಡಿಸಲಾಗಿದೆ.
ಉಳಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಕೊಣಾಜೆ ಠಾಣೆ ವ್ಯಾಪ್ತಿಯ ಅಂಬ್ಲಿಮೊಗರು ಬಸ್ತಿಕಟ್ಟೆ ಬಸ್ ನಿಲ್ದಾಣ, ಮುನ್ನೂರು ಗ್ರಾಮದ ಸೋಮನಾಥೇಶ್ವರ ಉಳಿಯ ಮಹಾದ್ವಾರ, ಎಲ್ಯಾರ್‌ಪದವು ಚರ್ಚ್ ಬಳಿ, ಹರೇಕಳ ಕಡವಿನ ಬಳಿ, ಇನೋಳಿಪದವು, ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಟೋಲ್ ಆಟೋ ನಿಲ್ದಾಣದ ಬಳಿ, ಉಳ್ಳಾಲ ಸೋಮೇಶ್ವರ ಮಹಾದ್ವಾರ, ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ಬಸ್ ನಿಲ್ದಾಣದ ಬಳಿ, ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಕೆಮರಾ ಅಳವಡಿಸಲಾಗಿದೆ.
ಪರವಾನಿಗೆ ರಹಿತ ಮರಳುಗಾರಿಕೆಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬರುತ್ತಿದ್ದ ಪ್ರದೇಶಗಳನ್ನು ಗುರುತಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅಕ್ರಮವನ್ನು ತಡೆಯುವ ಕಾರ್ಯ ಮಾಡಲಾಗುತ್ತದೆ.