ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರಾಚೀನ ಕನ್ನಡ ಶಾಸನಗಳ ಶೋಧನ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆ | ನಾಳೆ (ಏ.6) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯೋಜನೆಗೆ ಚಾಲನೆ

ಪುತ್ತೂರು: ಪ್ರಾಚೀನ ಕಾಲದ ಶಾಸನಗಳನ್ನು ಸಂರಕ್ಷಿಸುವ  ಹಾಗೂ ಅದನ್ನು ಬೆಳಕಿಗೆ ತರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಶಾಸನ ಶೋಧನ-ಅಧ್ಯಯನ ಸಂರಕ್ಷಣಾ ಯೋಜನೆ ಏ.6 ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆಗೊಳ್ಳಲಿದೆ.

ಪ್ರಾಚೀನ  ಕಾಲದಲ್ಲಿ ನಡೆದು ಹೋದ ಘಟನೆಗಳನ್ನು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ವಿವಿಧ ಪರಿಕರಗಳ ಮೇಲೆ ಬರೆಯಲಾದ ಅಮೂಲ್ಯ ಬರಹಗಳ  ಶೋಧನೆ, ಅಧ್ಯಯನ ಮಾಡಿ ಅದನ್ನು ಪ್ರಕಾಶನ ಮಾಡುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ  ಹಮ್ಮಿಕೊಳ್ಳಲಾದ  ವಿನೂತನ ಯೋಜನೆ ಇದಾಗಿದೆ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಒಂದು ಮಹತ್ತರ ಹೆಜ್ಜೆಯನಿಟ್ಟಿದ್ದು, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಇದು ರಾಜ್ಯದಲ್ಲೇ ಪ್ರಥಮ ಎನ್ನಬಹುದು.

ಯೋಜನೆಯ ಪ್ರಕಾರ, ದೇವಾಲಯಗಳಲ್ಲಿ, ಮಠ ಮಂದಿರಗಳಲ್ಲಿ, ಜೈನ ಮಂದಿರ, ಬಸದಿ, ಗರಡಿಗಳಲ್ಲಿ ಹಾಗೂ ದೈವಸ್ಥಾನ, ರಾಜರ ಅಥವಾ ಅರಸರ ಅರಮನೆಯಲ್ಲಿ, ಗುತ್ತಿನ ಮನೆಗಳಲ್ಲಿ, ತರವಾಡು ಮನೆಗಳಲ್ಲಿ, ಪ್ರಾಚೀನ ಮನೆಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಪ್ರಾಚೀನ ಬರವಣಿಗೆಯ  ಶಾಸನಗಳು ಲಭ್ಯವಾಗುತ್ತವೆ. ಇವುಗಳು ಶಿಲೆಗಳ ಮೇಲೆ, ತಾಮ್ರಪಟಗಳ ಮೇಲೆ, ರಥದಲ್ಲಿ, ತುಳಸಿ ಕಟ್ಟೆಯಲ್ಲಿ, ಮೂರ್ತಿಗಳ ಮೇಲೆ, ಗಂಟೆ,ಹರಿವಾಣ, ಆರತಿ, ಶಂಖ, ಖಡ್ಗ, ಮಡಕೆ, ಇತ್ಯಾದಿಗಳ ಮೇಲೆ ಬರೆಯಲ್ಪಟ್ಟಿರುತ್ತವೆ. ಇವುಗಳು ರಾಜಾಜ್ಞೆ, ದಾನ ಪತ್ರ, ಒಪ್ಪಂದ, ಪುರಾತನ ಘಟನೆಯ ವಿವರಗಳು ಇತ್ಯಾದಿಗಳನ್ನು ಹೊಂದಿರುತ್ತವೆ. ಇವುಗಳ ಅಧ್ಯಯನವು ನಮ್ಮ ಇತಿಹಾಸ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿ, ಸಾಮಾಜಿಕ ಹಾಗೂ ಚಾರಿತ್ರಿಕ  ನಡವಳಿಕೆಗಳು ಇತ್ಯಾದಿಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತವೆ.



































 
 

ಹಿರಿಯ ಶಾಸನ ತಜ್ಞರಾಗಿರುವ ಡಾ. ಉಮಾನಾಥ್ ಶೆಣೈ ಈ ಯೋಜನೆಯ ಮುಖ್ಯ ಅಧ್ಯಯನಕಾರರಾಗಿರುತ್ತಾರೆ. ಮೊದಲ ಹಂತದಲ್ಲಿ ಪುತ್ತೂರು ತಾಲೂಕು ಹಾಗೂ ಅದರ ಪರಿಸರವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿರುತ್ತದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ  ಈ ಶಾಸನ ಅಧ್ಯಯನವನ್ನು ವಿಸ್ತರಿಸಲಿದ್ದೇವೆ. ಈ ಯೋಜನೆಡಿಯಲ್ಲಿ ಸಂಬಂಧಪಟ್ಟ ಶಾಸನಗಳು ಲಭ್ಯವಾದ ವಿವರ, ಅದರ ಛಾಯಾಚಿತ್ರ, ಪೂರ್ಣಪಾಠ, ಭಾಷಾಂತರ ಸಾರಾಂಶ, ಸಂಕ್ಷಿಪ್ತ ಪರಿಚಯ ಇತ್ಯಾದಿಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಮುಂದಿನ ಹಂತದಲ್ಲಿ ಈ ಶಾಸನಗಳನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡುವ ಶಾಸನ ಅಧ್ಯಯನಕಾರರಿಗೆ ಉಪಯೋಗವಾಗುವಂತೆ ಆಂಗ್ಲ ಭಾಷೆಯಲ್ಲಿಯೂ ಪ್ರಕಟಿಸುವ ಯೋಜನೆ ಇದೆ. 

ಆದ್ದರಿಂದ ಈ ಪ್ರದೇಶದ ಸಾರ್ವಜನಿಕರು ತಮ್ಮಲ್ಲಿ ತಮ್ಮ ಸಂಸ್ಥೆಯಾ ತಮ್ಮ ಪರಿಸರದಲ್ಲಿ ಇಂತಹ ಪ್ರಾಚೀನ ಕನ್ನಡದ ಶಾಸನಗಳನ್ನು ಕಂಡರೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ  9844401295 ಗೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top