ಮಂಗಳೂರು: ಸೌಹಾರ್ದತೆಯ ಹೆಸರಿನಲ್ಲಿ ಇಫ್ತಾರ್ ಕೂಟವೊಂದನ್ನು ರಸ್ತೆಯಲ್ಲೇ ಆಯೋಜಿಸಿ ವಿವಾದಕ್ಕೆ ಕಾರಣವಾದ ಘಟನೆ ಉಳ್ಳಾಲ ತಾಲೂಕಿನ ಮುಡಿಪುವಿನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.
ಸೌಹಾರ್ದತೆಯ ಹೆಸರಿನಲ್ಲಿ ಮುಡಿಪುವಿನ ಮುಖ್ಯರಸ್ತೆಯ ಒಂದು ಬದಿಯಲ್ಲಿ ಬ್ಲಾಕ್ ಇಫ್ತಾರ್ ಕೂಟ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಡಿಪು ಜಂಕ್ಷನ್‌ನಲ್ಲಿ ಆಟೋ ರಾಜಕನ್ಮಾರ್ ಎಂಬ ಸಂಘಟನೆ ಈ ಇಫ್ತಾರ್ ಕೂಟ ಆಯೋಜಿಸಿದೆ ಎನ್ನಲಾಗಿದೆ. ರಿಕ್ಷಾ ಚಾಲಕರೆಲ್ಲರೂ ಒಟ್ಟಾಗಿ ಸೇರಿಕೊಂಡು ನಡೆಸಿದ ಈ ಇಫ್ತಾರ್ ಕೂಟದಲ್ಲಿ ರಿಕ್ಷಾ ಚಾಲಕರು, ವರ್ತಕರು, ಸ್ಥಳೀಯರು ಭಾಗಿಯಾಗಿದ್ದಾರೆ.
ರಸ್ತೆಯ ಒಂದು ಭಾಗದ ಮಧ್ಯೆ ಟೇಬಲ್, ಕುರ್ಚಿ ಇಟ್ಟು ಸಹಭೋಜನ ಮಾಡಲಾಗಿದೆ. ಇದರ ವಿಡಿಯೋವನ್ನು ಫ್ರಂಟಲ್ ಫೋರ್ಸ್ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಇಫ್ತಾರ್ ಕಾರ್ಯಕ್ರಮವನ್ನು ಸಭಾಂಗಣವೊಂದರಲ್ಲಿ ಆಯೋಜಿಸಲಾಗಿತ್ತು. ಆದರೆ ಹಿಂದುಗಳು ಭಾಗವಹಿಸಲು ಸಾಧ್ಯವಾಗದ ಕಾರಣ ಮುಡಿಪು ಜಂಕ್ಷನ್‌ಗೆ ಈ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.
ಮುಂದೆ ಕಟ್ಟಡ ಕಾರ್ಮಿಕರ ಜೊತೆಗೂ ಇಫ್ತಾರ್ ಕೂಟ ಆಯೋಜಿಸುವ ಚಿಂತನೆ ನಡೆಸಲಾಗಿದೆ. ರಂಜಾನ್ ಸಂದರ್ಭ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಮುಸ್ಲಿಮರು ಸೂರ್ಯಾಸ್ತದ ಬಳಿಕ ರೋಜಾ ಮುರಿದು ನಡೆಸುವ ಇಫ್ತಾರ್ ಕೂಟ ಇದಾಗಿದೆ.