ಪುತ್ತೂರು: ಆನ್ಲೈನ್ ಮೂಲಕ ವೈದ್ಯರೊಬ್ಬರಿಗೆ ಕರೆ ಮಾಡಿ ಲಕ್ಷಾಂತರ ರೂ. ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಬೊಳ್ವಾರು ನಿವಾಸಿ ಡಾ.ಚಿದಂಬರ ಅಡಿಗ ವಂಚನೆಗೊಳಗಾದವರು. ಈ ಕುರಿತು ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಮಾ.28 ರಂದು ಅಡಿಗ ಅವರಿಗೆ ದೂರವಾಣಿ ಮೂಲಕ ಫೋನ್ ಕರೆ ಬಂದಿದ್ದು, ಫೋನ್ ಸ್ವೀಕರಿಸಿ ಮಾತನಾಡಿದಾಗ, ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದು. ನಿಮ್ಮ ಮೇಲೆ ಅಕ್ರಮ ಮಾದಕ ವಸ್ತು ಸಹಿತ ಹಣ ಹೊಂದಿರುವ ಕುರಿತು ಪ್ರಕರಣ ದಾಖಲಾಗಿದೆ. ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಎಂದು ಹೇಳಿ ದೆಹಲಿ ಸಿಬಿಐ ಕೋರ್ಟ್ ಗೆ ಹಾಜರಾಗುವಂತೆ ತಿಳಿಸಿ, ನಿಮಗೆ ಕೋರ್ಟ್ ಗೆ ಹಾಜರಾಗಲು ಕಷ್ಟವಾದರೆ ಆನ್ ಲೈನ್ ಮೂಲಕ ಕೋರ್ಟ್ ಕೇಸು ನಡೆಸುತ್ತೇವೆ. ನೀವು ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬ್ರಕ್ಕೆ ವರ್ಗಾವಣೆ ಮಾಡಬೇಕು. ಕೋರ್ಟ್ ಕೇಸು ಮುಗಿದ ಬಳಿಕ ನಿಮ್ಮ ಹಣ ವಾಪಾಸು ಸಿಗುತ್ತದೆ. ಇಲ್ಲದಿದ್ದರೆ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದ್ದನೆನ್ನಲಾಗಿದೆ. ಈ ಕುರಿತು ಕೆಲವೊಂದು ದಾಖಲೆಗಳನ್ನು ಅಡಿಗರ ವಾಟ್ಸಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಅಪರಿಚಿತನನ್ನು ನಂಬಿ ಗಾಬರಿಗೊಂಡ ಅಡಿಗ ಅವರು ಬ್ಯಾಂಕ್ ಖಾತೆಯಿಂದ ಆರ್ ಟಿಜಿಎಸ್ ಮೂಲಕ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗೆ 16,50,000 ಹಣ ವರ್ಗಾವಣೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಅದೇ ವ್ಯಕ್ತಿ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಕ್ಷಣ ಅಡಿಗ ಅವರಿಗೆ ಅನುಮಾನ ಬಂದು ಸ್ನೇಹಿತರಲ್ಲಿ ವಿಚಾರಿಸಿದಾಗ ಆನ್ ಲೈನ್ ಮೋಸದ ಕೃತ್ಯ ಎಂದು ತಿಳಿದು ಬಂದಿದೆ.
ಈ ಕುರಿತು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.