ಪುತ್ತೂರು: ದೇಶದ ಬಗೆಗೆ ಅಭಿಮಾನವನ್ನು ಬೆಳೆಸುವಂತಹ ಕಾರ್ಯಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ಬೆಳೆಯಬೇಕು. ದೇಸೀಯ ಸಾಧಕರು, ಅವರ ಸಾಧನೆಗಳು ನಮ್ಮ ಆದರ್ಶವಾಗಬೇಕು. ನಮ್ಮನ್ನು ಆಕರ್ಷಿಸುವ ಅನೇಕ ವಿದೇಶೀ ಮೂಲದ ವಸ್ತುಗಳಿದ್ದರೂ ನಮ್ಮ ನೆಲದ ಉತ್ಪನ್ನಗಳಿಗೆ ನಾವು ಬೆಂಬಲ ನೀಡಬೇಕು. ದೇಶಕ್ಕೆ ಸಂಕಷ್ಟ ಒದಗಿದಾಗ ನೆರವಾಗುವವರು ನಮ್ಮವರೇ ಹೊರತು ಅನ್ಯರಲ್ಲ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವೆಂಚುರಾ ಎಂಬ ವಾಣಿಜ್ಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬುಧವಾರ ಮಾತನಾಡಿದರು.
ವಿದ್ಯಾರ್ಥಿಗಳು ಉದ್ಯಮ ಆರಂಭಿಸುವ ಬಗೆಗೆ ಯೋಚಿಸಬೇಕು. ಸ್ವಂತ ಶಕ್ತಿಯಿಂದ ಉದ್ಯೋಗದಾತರಾಗುವ ಗುರಿಯನ್ನು ಎಳವೆಯಲ್ಲೇ ಇಟ್ಟುಕೊಳ್ಳಬೇಕು. ಇನ್ನಾವುದೋ ದೇಶದ ಉತ್ಪನ್ನವನ್ನು ಖರೀದಿಸಿ ಆ ದೇಶಕ್ಕೆ ನಮ್ಮ ಹಣ ಹರಿದುಹೋಗುವುದನ್ನು ತಡೆಯಬೇಕಾದರೆ ನಮ್ಮದೇ ಉತ್ಪನ್ನಗಳನ್ನು ರೂಪಿಸಬೇಕಿದೆ. ದೇಶಪ್ರೇಮಿಗಳಾಗಿ ಬೆಳೆದಾಗ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಛಲ ಮನಸ್ಸಿನಲ್ಲಿ ಮೂಡಲಾರಂಭಿಸುತ್ತದೆ ಎಂದು ಹೇಳಿದರು.
ಮಾರ್ಕೆಟಿಂಗ್, ಎಚ್.ಆರ್, ರಿಸರ್ಚ್ ಅಂಡ್ ಡೆವಲಪ್ಮೆಂಟ್, ಸ್ಟೆçಸ್ ಮ್ಯಾನೇಜ್ ಮೆಂಟ್ ಹೀಗೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅತ್ಯಧಿಕ ಬಹುಮಾನ ಪಡೆದ ತಂಡಕ್ಕೆ ಸಮಗ್ರ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಲೇಖಾ ಸ್ವಾಗತಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಶರಣ್ಯ ವಂದಿಸಿದರು. ವಿದ್ಯಾರ್ಥಿ ಅನ್ಮಯ್ ಭಟ್ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಶಶಾಂಕ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.