ಇಟಾನಗರ: ವಿಧಾನಸಭೆ ಚುನಾವಣೆ ಇಲ್ಲದೆ ಬಿಜೆಪಿಯ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ವಿದ್ಯಮಾನ ನಡೆದಿರುವುದು ಅರುಣಾಚಲ ಪ್ರದೇಶದಲ್ಲಿ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿ ಐವರು ಬಿಜೆಪಿ ಅಭ್ಯರ್ಥಿಗಳು ವಿಧಾನಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿತ್ತು. ಆದರೆ ಕೊನೇ ಗಳಿಗೆ ತನಕ ಐದು ಕ್ಷೇತ್ರಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರುಣಾಚಲ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 60 ವಿಧಾನಸಭೆ ಕ್ಷೇತ್ರಗಳಿಗೆ ಏ.29ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಈ ಐದು ಕ್ಷೇತ್ರಗಳ ಫಲಿತಾಂಶ ಪ್ರಕಟಿಸಿಲ್ಲ. ಹಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ದುರ್ಬಲಗೊಂಡಿದ್ದು ಈ ಬಾರಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅರುಣಾಚಲ ಪ್ರದೇಶದ ಬೆಳವಣಿಗೆ ದೇಶದ ಮೂಡನ್ನು ತೋರಿಸುತ್ತಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಸಿಎಂ ನೇತೃತ್ವದಲ್ಲಿ ಬಿಜೆಪಿ 5 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅಗಾಧ ಅಭಿವೃದ್ಧಿಯಾಗಿದೆ. ದೇಶದ ಇತರೆಡೆಗಳಲ್ಲೂ ಈ ಫಲಿತಾಂಶ ಪ್ರತಿಫಲಿಸಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.