ಪುತ್ತೂರು: ಮಕ್ಕಳ ಭವಿಷ್ಯ ರೂಪಿಸುವ ಮೊದಲ ಶಾಲೆಯೇ ಅಂಗನವಾಡಿ. ಇಡೀಯ ಶಿಕ್ಷಣದ ಮೂಲಪಾಠವನ್ನು ನೀಡುವ ಅಂಗನವಾಡಿಗಳೇ ಪ್ರತಿಯೊಂದು ಮಗುವಿನ ಆರಂಭ. ಶಿಕ್ಷಣ ಮಾತ್ರವಲ್ಲ, ಪೌಷ್ಠಿಕ ಆಹಾರವೂ ಇಲ್ಲಿ ಲಭ್ಯ. ಹಾಗಿರುವಾಗ ಅಂಗನವಾಡಿ ಕಟ್ಟಡಗಳು ಹೇಗಿರಬೇಕು?
ಸುವ್ಯವಸ್ಥಿತ ಕಟ್ಟಡ, ಮೂಲಸೌಕರ್ಯ, ಪೌಷ್ಠಿಕ ಆಹಾರ, ಪುಟಾಣಿಗಳ ಕಲಿಕೆಗೆ ಪೂರಕ ವ್ಯವಸ್ಥೆಗಳು ಮೂಲಭೂತವಾಗಿ ಬೇಕೇಬೇಕು. ಇವನ್ನು ಪೂರೈಸುವ ದೃಷ್ಟಿಯಿಂದ ಮೂಲಭೂತವಾಗಿ ಬೇಕಾಗಿರುವ ಕಟ್ಟಡ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿರುವ ಶಾಸಕ ಸಂಜೀವ ಮಠಂದೂರು ಅವರು, ತನ್ನ ಶಾಸಕತ್ವದ ಅವಧಿಯಲ್ಲಿ 12 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆಂದೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಸಂಜೀವ ಮಠಂದೂರು ಅವರು ತಂದಿರುವ ಅನುದಾನ 1.44 ಕೋಟಿ ರೂ. ಇದಲ್ಲದೇ ಶುದ್ಧ ಕುಡಿಯುವ ನೀರನ್ನು ಪುಟಾಣಿಗಳಿಗೆ ಒದಗಿಸಬೇಕು ಎಂಬ ನೆಲೆಯಲ್ಲಿ 215 ಅಂಗನವಾಡಿಗಳಿಗೂ 1.85 ಕೋಟಿ ರೂ.ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಇಂತಹ ಯೋಜನೆ ಪುತ್ತೂರು ಬಿಟ್ಟು ಬೇರೆಲ್ಲಿಯೂ ಸಿಗಲಿಲ್ಲ ಎನ್ನುವುದೇ ಇಲ್ಲಿನ ವಿಶೇಷ.
ಎಷ್ಟೋ ಅಂಗನವಾಡಿಗಳಿಗೆ ಸರಿಯಾದ ಕಟ್ಟಡವೇ ಇರಲಿಲ್ಲ. ಇನ್ನೂ ಕೆಲವೆಡೆ ಶಿಥಿಲವಾಸ್ಥೆಯ ಕಟ್ಟಡದಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿತ್ತು. ಇಂತಹ ಕಟ್ಟಡದಲ್ಲಿ ಪುಟಾಣಿಗಳು ವಿದ್ಯಾಭ್ಯಾಸ ಮಾಡುವುದು ಅಪಾಯ ಎಂದರಿತ ಶಾಸಕ ಸಂಜೀವ ಮಠಂದೂರು ಅವರು, ಅಂಗನವಾಡಿಯ ಹೊಸ ಕಟ್ಟಡಗಳಿಗೆ ಪ್ರಾಶಸ್ತ್ಯ ನೀಡಿದ್ದಾರೆ. ಇಂದು ಸಾಕಷ್ಟು ಅಂಗನವಾಡಿಗಳು ಹೊಸ ಕಟ್ಟಡವನ್ನು ಪಡೆಯುವಂತಾಗಿದೆ.
ಸರಕಾರದ ಅನುದಾನ + ದಾನಿಗಳ ನೆರವು:
ಸರಕಾರದ ಅನುದಾನದಿಂದಲೇ ಎಲ್ಲಾವನ್ನು ಮಾಡಬೇಕು ಎಂದುಕೊಂಡರೆ ಅಭಿವೃದ್ಧಿ ಕಷ್ಟಕಾರ್ಯ. ಆದ್ದರಿಂದ ಸರಕಾರದಿಂದ ಸಿಕ್ಕ ಅನುದಾನವನ್ನು ಬಳಸಿಕೊಂಡು, ಇದಕ್ಕೆ ದಾನಿಗಳ ನೆರವನ್ನು ಜೊತೆಗೂಡಿಸಿಕೊಂಡು ಅಂಗನವಾಡಿಗಳಿಗೆ ಹೊಸ ಕಟ್ಟಡಭಾಗ್ಯ ನೀಡಲಾಗಿದೆ. ಶಾಸಕರ ಅನುದಾನದ ಜೊತೆಗೆ ನರೇಗಾ ಯೋಜನೆಯನ್ನು ಬಳಸಿಕೊಳ್ಳಲಾಗಿದೆ.