ಪುತ್ತೂರು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸೋಮವಾರ ಶ್ರೀ ಜನಾರ್ದನ ದೇವರ ಪುನಃ ಪ್ರತಿಷ್ಠೆ, ಶ್ರೀ ಶಾಸ್ತಾರ ದೇವರ ಪುನಃ ಪ್ರತಿಷ್ಠೆ ನಡೆಯಿತು.
ಸೋಮವಾರ ಮುಂಜಾನೆ 5 ರಿಂದ ತಂತ್ರಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಅಲ್ಪಪ್ರಾಸಾದ ಶುದ್ದಿ, ಪ್ರಾಸಾದ ಪ್ರತಿಷ್ಠೆ, ನಾಂದೀಪುಣ್ಯಾಹ, ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠ ಪ್ರತಿಷ್ಠೆ, ಶಯ್ಯಾ ಮಂಟಪದಿಂದ ಜೀವಕಲಶ ಬಿಂಬ, ನಿದ್ರಾ ಕಲಶಾಧಿಗಳನ್ನು ಗರ್ಭಗೃಹದ ಒಳಗೆ ಒಯ್ಯುವುದು ನಡೆದ ಬಳಿಕ ಬೆಳಿಗ್ಗೆ 9.35 ರಿಂದ 10.54 ವರೆಗೆ ನಡೆದ ವೃಷಭಲಗ್ನ ಶುಭಮುಹೂರ್ತದಲ್ಲಿ ಶ್ರೀ ಜನಾರ್ದನ ದೇವರು, ಶ್ರೀ ಶಾಸ್ತಾರ ದೇವರ ಪುನಃ ಪ್ರತಿಷ್ಠೆ ನಡೆಯಿತು. ಬಳಿಕ ಅಷ್ಠಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ ಜರಗಿತು.
ಮಧ್ಯಾಹ್ನ 12.00 ಕ್ಕೆ ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತೋದಕ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷ ಸೌಂದರ್ಯ ಮಂಜಪ್ಪ ಪಿ., ಪವಿತ್ರಪಾಣಿ ಡಾ.ಕೆ.ಹೇಮಂತ ಮೂರ್ತಿ ಎರ್ಕಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಗೌಡ ಹಿರ್ಕುಡೇಲು, ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ ಜೋಯಿಸ, ಅಭಿವೃದ್ಧಿ ಸಮಿತಿ ಸಂಚಾಲಕ ಮನೋಹರ ನಾಯ್ಕ್, ಕೋಶಾಧಿಕಾರಿ ಕೆ.ಜನಾರ್ದನ ಎರ್ಕಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮಹಾಬಲ ಗೌಡ ಗಡಿಮಾರು, ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಆನಾಜೆ, ಕಾರ್ಯದರ್ಶಿ ಗಿರಿಧರ್ ಜಿ. ಗೋಮುಖ, ವಿವಿಧ ಸಮಿತಿ ಸಂಚಾಲಕರು, ಸರ್ವ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.