ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷಕಲಾ ಕೇಂದ್ರ ಹಾಗೂ ಕೆದಂಬಾಡಿ ಎನ್ ಎಸ್ ಕಿಲ್ಲೆ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಯಕ್ಷ ಸಂವಾದ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.
ಕೆದಂಬಾಡಿ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಕಾರ್ಯಕ್ರಮ ಉದ್ಘಾಟಿಸಿ, ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರವು ಭಾರತೀಯ ಮಹಾ ಕಾವ್ಯ ಹಾಗೂ ಕಲಾ ಶ್ರೀಮಂತಿಕೆಯನ್ನು ಯಕ್ಷಪ್ರೇಮಿಗಳಿಗೆ ಯಕ್ಷಸಂವಾದ ಸರಣಿ ಕಾರ್ಯಕ್ರಮಗಳ ಮೂಲಕ ಉಣಬಡಿಸುತ್ತಿದೆ. ಯಕ್ಷ ಕಲಾ ಕೇಂದ್ರದ ವತಿಯಿಂದ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ. ಕೇಂದ್ರವು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ, ಸಂಭಾಷಣೆಯೇ ತಾಳಮದ್ದಳೆಯ ಜೀವಾಳ. ತಾಳಮದ್ದಳೆಯಲ್ಲಿ ಪ್ರಮುಖವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಲಾವಿದರ ವಾಕ್ಚಾತುರ್ಯದಿಂದ. ಸಂಗೀತ ಹಾಗೂ ಸಂಭಾಷಣೆಯ ಮೂಲಕ ತಾಳಮದ್ದಳೆಯು ಪೌರಾಣಿಕ ಪಾತ್ರಗಳಿಗೆ ಜೀವತುಂಬುತ್ತದೆ. ಕಲಾವಿದರು ತಮ್ಮ ಅರ್ಥಗಾರಿಕೆಯ ಮೂಲಕ ಪ್ರೇಕ್ಷಕರನ್ನು ಬೇರೇ ಲೋಕಕ್ಕೆ ಕೊಂಡೊಯ್ಯತ್ತಾರೆ. ಕಲೆಯ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ಸಾರೋಣ ಎಂದರು.
ಕಲಾವಿದರಾದ ಪ್ರಶಾಂತ ರೈ, ಲವ ಕುಮಾರ್, ವಿಷ್ಣು ಶರಣ, ಪ್ರೊ ಗಣರಾಜ ಕುಂಬ್ಳೆ, ವೆಂಕಟೇಶ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ ಸ್ವಾಗತಿಸಿ, ಯಕ್ಷ ಕಲಾಕೇಂದ್ರದ ಸಂಚಾಲಕ ಪ್ರಶಾಂತ ರೈ ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ “ಪರಮ ಶಿಷ್ಯ ಭೀಷ್ಮ” ಎಂಬ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತಪಡಿಸಲಾಯಿತು.