ಪುತ್ತೂರು : ಧಾರ್ಮಿಕ ಉಪನ್ಯಾಸ ನೀಡಿ, ಹಿರಿಯರ ತ್ಯಾಗದ ಫಲವಾಗಿ ದೇಶ ಇಂದು ಪ್ರಜ್ವಲಿಸುತ್ತಿದೆ. ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಧರ್ಮದ ಅರಿವು ಮನೆಯಿಂದಲೇ ಆಗಬೇಕು ಎಂದು ಡಾ.ಈಶ್ವರಚಂದ್ರ ಜೋಯಿಸ ಹೇಳಿದರು.
ಅವರು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಲಿಯುಗದಲ್ಲಿ ಭಜನೆಗೆ ಅಪಾರ ಶಕ್ತಿಯಿದೆ. ಭಜನೆಯಿಂದ ಭಗವಂತನ ಅನುಸಂಧಾನದ ಜತೆಗೆ ಸಮಾಜದ ಜಾಗೃತಿ ಸಾಧ್ಯ. ಕೊಡಿಪಾಡಿ ಬಹಳ ವಿಶೇಷತೆಯನ್ನು ಹೊಂದಿರುವ ಕ್ಷೇತ್ರವಾಗಿದ್ದು, ಗ್ರಾಮದ ಜನರ ಶ್ರಮದ ಹೆಜ್ಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾಣುತ್ತಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳಿಂದ ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಆಗಬೇಕು. ಕೊಡಿಪಾಡಿ ಕ್ಷೇತ್ರ ಇತರರಿಗೆ ಮಾದರಿಯಾಗುವ ಕೆಲಸ ಮಾಡಿದೆ ಎಂದು ನುಡಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗ್ರಾಮಸ್ಥರ ಕಲ್ಪನೆ ಇಂದು ಇಲ್ಲಿ ಸಾಕಾರವಾಗಿದೆ. ದೇವರ ಮೇಲಿನ ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ಗ್ರಾಮೀಣ ಭಾಗದ ಜನರಲ್ಲಿ ಧರ್ಮದ ಚಿಂತನೆಯಿದ್ದು, ಹಿರಿಯರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಾವು ಮುಂದುವರಿಯಬೇಕಾಗಿದೆ ಎಂದು ಹೇಳಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನಂಬಿಕೆಯ ಆಧಾರದಲ್ಲಿ ನಾವೆಲ್ಲರೂ ಬದುಕುತ್ತಿದ್ದು, ಧಾರ್ಮಿಕ ವ್ಯವಸ್ಥೆಯ ಜತೆಗೆ ಸಾಗಬೇಕಾಗಿದೆ. ರಾಷ್ಟ್ರ, ಧರ್ಮ ಉಳಿದರೆ ಹಿಂದುತ್ವ ಉಳಿಯಲು ಸಾಧ್ಯ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಗೌಡ ಹಿರ್ಕುಡೇಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸ್ಥಾನ ನನಗೆ ಒಲಿದು ಬಂದಿರುವುದು ಬಯಸದೇ ಬಂದ ಭಾಗ್ಯ. ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದೆ ಎಂದರು.
ಡಾ.ಗಣೇಶ್ ಪ್ರಸಾದ್ ಮುದ್ರಜೆ, ಡಾ.ರಾಜರಾಮ್ ಕೆ.ಬಿ., ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸಾಮಾಜಿಕ ಕಾರ್ಯಕರ್ತ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಹಾರಕೆರೆ ವೆಂಕಟ್ರಮಣ ಭಟ್, ವಾಸುಕೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸೋಮಶೇಖರ ಪೂಜಾರಿ ಓಜಾಳ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ, ಮತ್ತಿತರರು ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಮನೋಹರ ನಾಯ್ಕ್‍ಕೊಳಕ್ಕಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಸ್ವಾಗತಿಸಿದರು. ಮನ್ಮಥ ಕಾರ್ಯಕ್ರ,ಮ ನಿರೂಪಿಸಿದರು. ಅಭಿಜಿತ್ ಕೊಳಕ್ಕಿಮಾರ್ ವಂದಿಸಿದರು.
ವೈದಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಿಗ್ಗೆ 5 ರಿಂದ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಸೃಷ್ಟಿತತ್ವ ಹೋಮ, ಕಲಶಪೂಜೆ, ತತ್ತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ ನಡೆಯಿತು. ಬಳಿಕ ಮಹಾಪೂಜೆ ನಡೆದು ಅನ್ನಸಂತರ್ಪಬೆ ಜರಗಿತು. ಸಂಜೆ ದುರ್ಗಾಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿದವು. ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ.ಕಿರಣ್ ಕುಮಾರ್ ಗಾನಸಿರಿ ಕಲಾ ಕೇಂದ್ರದ ಕಲಾವಿದರಿಂದ ಗಾನಸಿರಿ ಸ್ವರಮಾಧುರ್ಯ ನಡೆಯಿತು.