ಪುತ್ತೂರು: ತಮಿಳುನಾಡು ಮೂಲದ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯೊಬ್ಬಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಈಸ್ವರಿ (45) ಬಂಧಿತ ಆರೋಪಿಯಾಗಿದ್ದು, ಈಕೆಯಿಂದ ಸುಮಾರು ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ಫೆ.12 ರಂದು ಪುತ್ತೂರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎನ್. (41) ಎಂಬವರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದಿದ್ದರು. ಈ ಕುರಿತು ರೇಷ್ಮಾ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ತಮಿಳುನಾಡು ರಾಜ್ಯದ ಸಿಕ್ಕಲಂಪಳಯಂ ಕೋಯಂಬತ್ತೂರ್ ಜಿಲ್ಲೆಯ ಈಸ್ವರಿಯನ್ನು ಬಂಧಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ,.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್. ಅವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಉಪನಿರೀಕ್ಷಕರಾದ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ. ಸಾರಥ್ಯದಲ್ಲಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ. ಹಾಗೂ ಸುಬ್ರಹ್ಮಣ್ಯ ಎಚ್. ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ.ಸ್ಕರಿಯ ಎಂ.ಎ., ಬಸವರಾಜ, ಜಗದೀಶ್, ಸುಬ್ರಹ್ಮಣ್ಯ, ವಿನಾಯಕ ಎಸ್.ಬಾರ್ಕಿ, ಶರಣಪ್ಪ ಪಾಟೀಲ್, ರೇವತಿ, ಗಣಕ ಯಂತ್ರ ವಿಭಾಗದ ಸಂಪತ್ ಹಾಗೂ ದಿವಾಕರ್ ಪ್ರಕರಣ ಬೇಧಿಸುವಲ್ಲಿ ಸಹಕರಿಸಿದ್ದರು.