ಪುತ್ತೂರು: ಮತದಾನದ ದಿನ ನಾನೊಬ್ಬ ಮತದಾನ ಮಾಡದಿದ್ದರೆ ಏನೂ ಆಗದು ಎಂಬ ಭಾವನೆ ಹಲವರಲ್ಲಿದೆ. ಆದರೆ ನಮ್ಮ ಒಂದು ಮತ ಫಲಿತಾಂಶವನ್ನೇ ಬದಲಿಸಬಲ್ಲ ಶಕ್ತಿಯನ್ನು ಹೊಂದಿದೆ. ಇದು ಪ್ರಜೆಗಳ ಹಕ್ಕಾಗಿದ್ದು, ಕರ್ತವ್ಯವೂ ಆಗಿದೆ. ತಪ್ಪದೇ ಮತದಾನ ಮಾಡುತ್ತೇನೆಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಪುತ್ತೂರು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮಾ.23 ರಂದು ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರತಿ ಪ್ರಜೆಯ ಮತವು ಮಹತ್ವದ್ದಾಗಿದೆ. ಆದರೆ ವಿದ್ಯಾವಂತರಾಗಿರುವ ಇಂದಿನ ಜನಾಂಗ ಚುನಾವಣೆಯಲ್ಲಿ ಭಾಗವಹಿಸದೆ ಹಿಂದುಳಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ವಿದ್ಯಾರ್ಥಿಗಳಿಂದ ನಡೆಯಬೇಕಿದೆ ಎಂದರು.
ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲ, ಐಕ್ಯೂಎಸಿ ಘಟಕದ ಸಂಯೋಜನಾಧಿಕಾರಿ ಚಂದ್ರಕಾಂತ ಗೋರೆ ಮಾತನಾಡಿ, ಚುನಾವಣಾ ಆಯೋಗದ ಕಾರ್ಯಭಾರವು ಆಧುನಿಕತೆಯನ್ನು ಪಡೆದಿದೆ. ಆಯೋಗವೇ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ನಡೆ. ಹಾಗೆಯೇ ಪ್ರಜೆಗಳು ಮತದಾನದ ಬಗ್ಗೆ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರಜೆಗಳ ಆಯ್ಕೆಯೇ ಸರ್ಕಾರದ ರಚನೆಗೆ ಮುನ್ನುಡಿ ಬರೆಯುತ್ತದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಎಂ. ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತೃಪ್ತಿ ಪ್ರಾರ್ಥಿಸಿ, ಮಾನ್ಯ ಸ್ವಾಗತಿಸಿದರು. ಅಂಕಿತಾ ವಂದಿಸಿ, ಪಂಚಮಿ ನಿರೂಪಿಸಿದರು.