ಸಾಮೂಹಿಕ ಆತ್ಮಹತ್ಯೆ ಶಂಕೆ
ಪುಣೆ: ಪುಣೆ ಜಿಲ್ಲೆಯ ದೌಂಡ್ ಪಟ್ಟಣದ ನದಿಯಲ್ಲಿ ಒಂದೇ ಕುಟುಂಬದ 7 ಮಂದಿಯ ಮೃತದೇಹಗಳು ಪತ್ತೆಯಾಗಿರುವುದು ಆಘಾತವನ್ನುಂಟು ಮಾಡಿದೆ. ಇದೊಂದು ಅಸಹಜ ಸಾವು ಎಂದು ಪೊಲೀಸರು ಹೇಳಿದ್ದಾರೆ.
ಏಳು ಮೃತದೇಹಗಳನ್ನು ನದಿಯಿಂದ ಮೇಲೆತ್ತಲಾಗಿದೆ. ಒಂದೇ ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದರೂ, ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ವಿವರವಾದ ತನಿಖೆ ನಡೆಸುವವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜ.18 ರಂದು ದೌಂಡ್‌ನಲ್ಲಿ ಭೀಮಾ ನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ನಂತರ ಸ್ಥಳೀಯ ಮುನ್ಸಿಪಲ್ ಕಾರ್ಪೋರೇಶನ್ ಜತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಸೋಮವಾರ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಮೃತರ ಪೈಕಿ ಒಬ್ಬರ ಜೇಬಿನಿಂದ ಮೊಬೈಲ್ ಫೋನ್ ಪತ್ತೆಯಾಗಿದೆ. ಇದರಿಂದ ಅವರು ಗುರುತು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ
.ಮಂಗಳವಾರ ಮೂವರ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ನದಿಯ ವಿವಿಧೆಡೆಗಳಲ್ಲಿ ಶವಗಳು ಸಿಕ್ಕಿವೆ. ಎಲ್ಲ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಈ ಕುಟುಂಬದ ಯುವಕನೊಬ್ಬ ವಿವಾಹಿತ ಮಹಿಳೆ ಜತೆ ಓಡಿ ಹೋಗಿದ್ದು, ಇದರಿಂದಾದ ಅವಮಾನದಲ್ಲಿ ಇಡೀ ಕುಟುಂಬ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಅನುಮಾನಿಸಲಾಗಿದೆ.