ಪುತ್ತೂರು: 5 ವರ್ಷಗಳಲ್ಲೇ ಮೊದಲ ಬಾರಿಗೆ ಅಂತರ್ಜಲ ಬರಿದಾಗಿ ಬೋರ್ವೆಲ್ ಕೈಕೊಟ್ಟ ಘಟನೆ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜೂರುಪಂಜದಲ್ಲಿ ನಡೆದಿದೆ. ಇದರಿಂದ ಕೆಲ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ಆರ್ಯಾಪು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯೋನ್ಮುಖವಾಗಿದೆ.
ಬೇಸಿಗೆಯ ತಾಪ ಜನವರಿಯಿಂದಲೇ ಪ್ರಖರವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಕಾಡಲು ಶುರುವಾಗಿದೆ. ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಭೆಗಳಲ್ಲಿ ಈಗಾಗಲೇ ನೀರಿನ ಕೊರತೆ ಬಗ್ಗೆ ಚರ್ಚಿಸಿದ್ದು, ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಲಾಗಿತ್ತು.
ಕುಂಜೂರುಪಂಜದಲ್ಲಿ 5 ವರ್ಷ ಹಳೆಯ ಬೋರ್ವೆಲ್ ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಒಣಗಿದೆ. 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗಾಗಿದ್ದು, ಹೂಳು ತುಂಬಿ ಸಮಸ್ಯೆ ಉದ್ಭವಿಸಿದೆ ಎಂದು ಹೇಳಲಾಗಿದೆ. ಸುಮಾರು 500 ಅಡಿ ಆಳ ಕೊರೆಸಲಾದ ಕೊಳವೆ ಬಾವಿ, ಇದೀಗ 290 ಅಡಿಗೆ ತಲುಪಿದೆ. ಅಂದರೆ ಅಷ್ಟು ಭಾಗ ಹೂಳಿನಿಂದ ಕೂಡಿ, ಅಂತರ್ಜಲ ಬರಿದಾಗುವಂತೆ ಮಾಡಿದೆ.
ಬೋರ್ವೆಲ್ ಇದ್ದಕ್ಕಿದ್ದಂತೆ ಬರಿದಾಗಿರುವುದರಿಂದ ಸ್ಥಳೀಯ ಸುಮಾರು 30 ಮನೆಗಳ ನಿವಾಸಿಗಳಿಗೆ ಕೆಲ ದಿನಗಳಿಂದ ನೀರಿನ ಅಭಾವ ಎದುರಾಗಿತ್ತು. ಆರ್ಯಾಪು ಗ್ರಾಮ ಪಂಚಾಯತ್ ಆಡಳಿತಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಹೊಸ ಬೋರ್ವೆಲ್ ಕೊರೆಸಲು ವ್ಯವಸ್ಥೆ ಮಾಡಿದೆ. ಮಂಗಳವಾರ ರಾತ್ರಿಯೇ ಬೋರ್ವೆಲ್ ಆಗಮಿಸಿ, ಹೊಸ ಕೊಳವೆಬಾವಿ ತೋಡಲಿದೆ ಎಂದು ಹೇಳಲಾಗಿದೆ.
ಇಂದೇ ಬೋರ್ವೆಲ್ ಕೊರೆತ: ಗ್ರಾಪಂ ಅಧ್ಯಕ್ಷೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಆಡಳಿತ ಕಾರ್ಯೋನ್ಮುಖವಾಗಿದೆ. ಇಂದು (ಮಂಗಳವಾರ) ರಾತ್ರಿ ಬೋರ್ವೆಲ್ ಕೊರೆಸುತ್ತಿದ್ದು, ಇದಕ್ಕೆ ಪೂರ್ವಭಾವಿ ಕೆಲಸಗಳು ಈಗ ನಡೆಯುತ್ತಿದೆ. ನಮ್ಮ ಹಂತದಲ್ಲೇ ನಡೆಸಬಹುದಾದ ಕಾಮಗಾರಿ ಇದಾಗಿದ್ದು, ಶಾಸಕರಲ್ಲಿವರೆಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ನಾಲ್ಕೇ ದಿನದಲ್ಲಿ ಸ್ಪಂದನೆ: ಪಿಡಿಓ
ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಅವರಲ್ಲಿ ಕೇಳಿದಾಗ, ಬೋರ್ವೆಲ್ ಡ್ರೈ ಆದ ಕಾರಣ, ನೀರಿನ ಅಭಾವ ಎದುರಾಗಿದೆ. ಅನಿರೀಕ್ಷಿತವಾಗಿ ಬೋರ್ವೆಲ್ ಕೊರೆಸಲು ಅವಕಾಶ ಇಲ್ಲದೇ ಇದ್ದರೂ, ತುರ್ತು ಕಾರಣ ನೀಡಿ ನಾಲ್ಕೇ ದಿನದಲ್ಲಿ ಬೋರ್ವೆಲ್ ಕೊರೆಸುವ ವ್ಯವಸ್ಥೆ ಮಾಡಿದ್ದೇವೆ. ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತದೆ ಎಂದು ತಿಳಿಸಿದ್ದಾರೆ.