ಡಿ.ವಿ.ಎಸ್‍. ಗೆ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದಿಂದಲೂ ಟಿಕೇಟ್ ಆಫರ್ ! | ಬಿಜೆಪಿಯಿಂದ ಮನವೊಲಿಕೆಗೆ ಯತ್ನ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಡಿ.ವಿ.ಸದಾನಂದ ಗೌಡರು ತಮ್ಮ ಮುಂದಿನ ನಡೆ ಕುರಿತು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರ ನಡೆ ನಿಗೂಢವಾಗಿಯೇ ಉಳಿದಿದೆ. ಮುನಿಸಿಕೊಂಡಿರುವ ಸದಾನಂದ ಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ನೀಡಿದೆ. ಇನ್ನೊಂದೆಡೆ ಡಿ.ವಿ.ಸದಾನಂದ ಗೌಡರನ್ನು ಸೆಳೆಯಲು ಕಾಂಗ್ರೆಸ್‌ನಿಂದಲೂ ಪ್ರಯತ್ನ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಡಿ.ವಿ.ಸದಾನಂದ ಗೌಡ ಮಾ.19ರಂದು ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಮಾ.20ರಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂದಿನ ರಾಜಕೀಯ ನಿರ್ಧಾರದ ಕುರಿತ ಎಲ್ಲಾ ವಿವರ ನೀಡುವುದಾಗಿ ಹೇಳಿದ್ದಾರೆ.

ಮುನಿಸು ಶಮನಕ್ಕೆ ಪ್ರಯತ್ನ:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಸಂಸದ ಡಿ.ವಿ.ಸದಾನಂದ ಗೌಡರನ್ನು ಸಮಾಧಾನಪಡಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಸದಾನಂದ ಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ಆ-‌ರ್ ಕೊಟ್ಟಿದೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಗ್ಗೆ ಹೈಕಮಾಂಡ್ ಆಫರ್ ನೀಡಿದ್ದರೂ ಸದಾನಂದ ಗೌಡ ಸಹಮತ ಸೂಚಿಸಿಲ್ಲ ಎಂದು ವರದಿಯಾಗಿದೆ. ಚಿಕ್ಕಬಳ್ಳಾಪುರ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವೆ ಪೈಪೋಟಿ ನಡೆಯುತ್ತಿದೆ. ಇವರಿಬ್ಬರ ನಡುವಿನ ಹಗ್ಗಜಗ್ಗಾಟದಲ್ಲಿ ಸದಾನಂದ ಗೌಡರಿಗೆ ಟಿಕೆಟ್‌ ಸಿಗುತ್ತಾ ಎನ್ನುವುದು ಈಗ ಕುತೂಹಲ ಮೂಡಿಸಿದೆ. ಒಂದು ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ದೊರೆತಲ್ಲಿ ಕರಾವಳಿ ಭಾಗದಿಂದ ಚಿಕ್ಕಬಳ್ಳಾಪುರದ ಟಿಕೆಟ್ ಪಡೆಯುತ್ತಿರುವ ಎರಡನೇ ರಾಜಕಾರಣಿಯಾಗಲಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡನೇ ಬಾರಿ ಸೋಲು ಅನುಭವಿಸಿದ್ದರು.





























 
 

ವಿಜಯೇಂದ್ರರಿಂದ ಮನವೊಲಿಕೆ ಯತ್ನ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದ ಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆ ಸದಾನಂದ ಗೌಡರಿಗೆ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಜೊತೆಗೆ ವಿಜಯೇಂದ್ರ ಅವರು ತಮ್ಮ ಆಪ್ತರನ್ನು ಸದಾನಂದ ಗೌಡರ ಮನೆಗೆ ಕಳುಹಿಸಿ ಮನವೊಲಿಕೆ ಯತ್ನ ನಡೆಸಿದ್ದಾರೆ.

ಒಕ್ಕಲಿಗ ಸಂಘದ ಜೊತೆ ಸಭೆ:

ಬೆಂಗಳೂರಿನಲ್ಲೇ ಇರುವ ಡಿ.ವಿ.ಸದಾನಂದ ಗೌಡರು ಮಾ.19ರಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹಾಗೂ ನಿರ್ದೇಶಕರ ಜೊತೆಗೆ ಸಭೆ ನಡೆಸಿ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು ಸಭೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈಗ ಏನೂ ಹೇಳಲ್ಲ. ಮಾ.20ರಂದು ಸುದ್ದಿಗೋಷ್ಠಿಯಲ್ಲಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ತಮ್ಮ ರಾಜಕೀಯ ನಿರ್ಧಾರದ ಕುರಿತು ಯಾವುದೇ ಗುಟ್ಟು ಬಿಟ್ಟು ಕೊಡದ ಡಿ.ವಿ.ಸದಾನಂದ ಗೌಡರ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಡಿವಿಗೆ ಒಕ್ಕಲಿಗರ ಸಂಘ ಬೆಂಬಲ:

ಡಿ.ವಿ.ಸದಾನಂದ ಗೌಡರು ತೆಗೆದುಕೊಳ್ಳುವ ರಾಜಕೀಯ ನಿರ್ಧಾರ ಬೆಂಬಲಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷಗಳಿಂದಲೂ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಬಿಜೆಪಿಯಲ್ಲಿ 8 ಕ್ಷೇತ್ರಗಳಲ್ಲಿ ಲಿಂಗಾಯಿತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 2 ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೂ 8 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಟಿಕೆಟ್ ನೀಡಬೇಕು. ಡಿ.ವಿ.ಸದಾನಂದ ಗೌಡ, ಸಿ.ಟಿ.ರವಿ., ಪ್ರತಾಪಸಿಂಹ ಸೇರಿ ಒಕ್ಕಲಿಗ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ಇದರ ವಿರುದ್ಧ ಹೋರಾಟ ಮಾಡುವುದಾಗಿಯೂ ಹೇಳಿದ್ದಾರೆ.

ವರಿಷ್ಠರ ಕರೆ, ಸುದ್ದಿಗೋಷ್ಟಿ ಇಂದಿಗೆ ಮುಂದೂಡಿಕೆ ಮಾ.18ರಂದು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಡಿ.ವಿ.ಸದಾನಂದ ಗೌಡ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಮಾ.19ರಂದು ಸುದ್ದಿಗೋಷ್ಠಿ ನಡೆಸಿ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ ಸದಾನಂದ ಗೌಡ ಸುದ್ದಿಗೋಷ್ಠಿಯನ್ನು 1 ದಿನದ ಮಟ್ಟಿಗೆ ಮುಂದೂಡಿ ಮಾ.20ರಂದು ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದಾರೆ. ಬೆಳಗ್ಗೆ ಪಕ್ಷದ ವರಿಷ್ಠರ ಕರೆ ಹಿನ್ನೆಲೆಯಲ್ಲಿ ಸದಾನಂದ ಗೌಡ ಅವರು ಸುದ್ದಿಗೋಷ್ಠಿ ಮುಂದೂಡಿದ್ದಾರೆ ಎಂದು ಗೊತ್ತಾಗಿದೆ.

ಡಿವಿಎಸ್ ನಮ್ಮ ನಾಯಕರು:

ಶೋಭಾ ಡಿ.ವಿ.ಸದಾನಂದ ಗೌಡ ನಮ್ಮ ಹಿರಿಯ ನಾಯಕರು. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ರೈಲ್ವೆ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಅವರು ನಮ್ಮ ಜೊತೆಗೇ ಇರುತ್ತಾರೆ. ಗೊಂದಲ ಹೇಗೆ ಆರಂಭವಾಯಿತು ಎಂಬುದು ಗೊತ್ತಿಲ್ಲ ಎಂದು ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top