ಪುತ್ತೂರು: ಏ.21 ರಿಂದ 28 ರ ತನಕ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ನಡೆಯಿತು.
ಆರಂಭದಲ್ಲಿ ದೇವಸ್ಥಾನ ಬಾಲಾಲಯದ ಎದುರು ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ನಡೆದು ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ,, ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಸಹಿತ ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ರಾಜಕೀಯ ಹೊರಗಿಟ್ಟು ಎಲ್ಲರೂ ಒಟ್ಟಾಗಿ ಪಾಲ್ಗೊಳ್ಳಬೇಕು. ಅದರಲ್ಲೂ ವಿಶೇಷ ಪೂಜೆ, ಅತಿಥಿ ಸತ್ಕಾರ ಮುಂತಾದ ವಿಶೇಷ ಕಾರ್ಯದಲ್ಲಿ ವಿವಿಧ ಸಮಿತಿಯವರಿಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿ, ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡಲ್ಲಿ ಸಾನಿಧ್ಯಕ್ಕೆ ಶಕ್ತಿ ಬರಲು ಸಾಧ್ಯ ಎಂದ ಅವರು, ಈಗಾಗಲೇ ಸರಕಾರದ ವತಿಯಿಂದ 10 ಲಕ್ಷ ಅಭಿವೃದ್ಧಿ ಕಾರ್ಯ ಹಾಗೂ ದೇವಸ್ಥಾನ ಸಂಪರ್ಕಿಸುವ ರಸ್ತೆಗೆ ಐದು ಲಕ್ಷ ಹೀಗೆ ಒಟ್ಟು 15 ಲಕ್ಷ ರೂ. ನೀಡಲಾಗಿದೆ. ಮುಂದೆ ನನ್ನಿಂದಾದ ಸೇವೆಯನ್ನು ನೀಡುತ್ತೇನೆ ಎಂದು ಹೇಳಿದರು.
ಜಿರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಈಗಾಗಲೇ ದೇವಸ್ಥಾನದಲ್ಲಿ 75 ಶೇ. ಅಭಿವೃದ್ಧಿ ಕಾರ್ಯ ಮುಗಿದಿದ್ದು, ಇನ್ನು 25 ಶೇ. ಬಾಕಿಯಿದೆ. ಇದಕ್ಕೆ ಆರ್ಥಿಕ ಕ್ರೋಢೀಕರಣ ಆಗಬೇಕಾಗಿದೆ. ಅಲ್ಲದೆ ಬ್ರಹ್ಮಕಲಶೋತ್ಸವಕ್ಕೆ ಸುಮಾರು 40 ರಿಂದ 50 ಲಕ್ಷ ರೂ. ಖರ್ಚು ಬೇಕಾಗಬಹುದು. ಈ ನಿಟ್ಟಿನಲ್ಲಿ ಶಾಸಕರ, ಊರ, ಪರವೂರ ಭಕ್ತಾದಿಗಳ ಸಹಕಾರ ಕೋರಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಿವಿಧ ಸಮಿತಿಗಳ ಜವಾಬ್ದಾರಿಗಳನ್ನು ತಿಳಿಸಿ, ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ, ಸಂಜೀವ ಪೂಜಾರಿ ಕೂರೇಲು, ಡಾ.ಸತೀಶ್ ಮರಿಕೆ, ಕೋಶಾಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಸಂಚಾಲಕ ಸುಧಾಕರ ರಾವ್ ಆರ್ಯಾಪು, ವೈದಿಕ ಸಮಿತಿ ಸಂಚಾಲಕ ಸಂದೀಪ್ ಕಾರಂತ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿದರು.