ಪುತ್ತೂರು: ಕನ್ನಡ ಭಾಷೆ ಬಹಳ ಸೊಗಸು. ಕನ್ನಡದಲ್ಲಿ ಎಲ್ಲವನ್ನು ವಿವರಿಸಲೂ ಚಂದ. ಕನ್ನಡ ಭಾಷೆಯ ಸಾಧ್ಯತೆ ಅಗಾಧವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಕರ್ನಾಟಕ ಸಂಘ ಪುತ್ತೂರು ಹಾಗೂ ಲಕ್ಷ್ಮೀಶ ತೋಳ್ಪಾಡಿ ಸಾರ್ವಜನಿಕ ಅಭಿನಂದನಾ ಸಮಿತಿ ಪುತ್ತೂರು ಸಹಯೋಗದಲ್ಲಿ ಪುತ್ತೂರು ಅನುರಾಗ ವಠಾರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಯಾವುದೇ ಸಾಹಿತ್ಯ, ಕಾವ್ಯಗಳನ್ನು ಓದುವಾಗ ನಮ್ಮ ಅಗೋಚರ ಶಕ್ತಿ ಜಾಗೃತವಾಗುತ್ತದೆ. ವಚನ ಸಾಹಿತ್ಯ, ಮಹಾಭಾರತ, ಉಪನಿಷತ್, ಭಗವದ್ಗೀತೆಗಳು ನನ್ನನ್ನು ಹಿಡಿದಿಟ್ಟಿದೆ. ಮಹಾಭಾರತ ಕಾವ್ಯದ ಅನುಸಂಧಾನ ಬರೆಯಲು ಹಲವರು ನನ್ನಲ್ಲಿ ಹೇಳಿದರು. ಹಾಗಾಗಿ ನಾನು ಭಾರತ ಯಾತ್ರೆ ಕೃತಿ ಬರೆದೆ ಎಂದರು. ಪ್ರಕೃತಿಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ನಾಶವಾಗುವ ಮೂಲಕ ಪುನರುಜ್ಜೀವನವೂ ಆಗುತ್ತದೆ. ಹಾಗೆಯೇ ಭಾಷೆಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದರು.
ಪ್ರಾಧ್ಯಾಪಕ, ಸಾಹಿತಿ ಹಾಗೂ ವಿಮರ್ಶಕ ಡಾ. ನರೇಂದ್ರ ರೈ ದೇರ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುತ್ತೂರಿಗರ ಪಾಲಿಗೆ ಇದು ಘನತೆಯ ಕಾರ್ಯಕ್ರಮ. ಅನುರಾಗ ವಠಾರ ಸಾಹಿತಿಗಳಿಂದ ಕೂಡಿದ ವಠಾರ. ಅನುರಾಗದ ಮೌನ ಮತ್ತು ಏಕಾಂತ ನನಗೆ ಇಷ್ಟ. ಇದರ ನಡುವೆ ಲಕ್ಷ್ಮೀಶ ತೋಳ್ಪಾಡಿಯವರ ಮೌನ ಧ್ಯಾನ ಸೇರಿಕೊಂಡಿದೆ. ಅನೇಕರು ಮಹಾಭಾರತದ ಒಳಗಡೆ ನಿಂತು ಮಾತನಾಡುತ್ತಾರೆ. ಈ ಭಾರತದ ಒಳಗಡೆ ಮಾತನಾಡುವುದಿಲ್ಲ. ಅವರು ಏಕಕಾಲದಲ್ಲಿ ಮಾಹಾಭಾರತದಲ್ಲಿಯೂ ನಿಲ್ಲುತ್ತಾರೆ. ಈ ಭಾರತದಲ್ಲಿಯೂ ನಿಲ್ಲುತ್ತಾರೆ. ಅದಕ್ಕೆ ನನಗೆ ತೋಳ್ಪಾಡಿಯವರು ಇಷ್ಟವಾಗುತ್ತಾರೆ. ತನ್ನ ಪರಿಸರ, ಮಣ್ಣು, ನೀರಿನ ಬಗ್ಗೆ ಯೋಚಿಸುವ ಸಾಹಿತಿ ತೋಳ್ಪಾಡಿಯವರು. ಪ್ರಾಮಾಣಿಕತೆ ಕರ್ತವ್ಯ ನಿಷ್ಟೆ ಬದ್ಧತೆ ಇದ್ದರೆ ಮಾತ್ರ ಮಹಾಭಾರತದ ಒಳಗಡೆ ಅನುಸಂಧಾನ ಸಾಧ್ಯ ಎಂದು ತೋರಿಸಿದ ಅಪರೂಪದ ಸಾಹಿತಿ. ಅವರು ಏಕಕಾಲದಲ್ಲಿ ಮಹಾಭಾರತ ಕಾವ್ಯದ ಒಳಗಡೆಯೂ ಇರುತ್ತಾರೆ. ಕುಮಾರಧಾರಾ ಚಳುವಳಿಯಲ್ಲಿಯೂ ಇರುತ್ತಾರೆ. ಪಶ್ಚಿಮಘಟ್ಟದ ಹೋರಾಟದಲ್ಲಿಯೂ ಇರುತ್ತಾರೆ. ಧಾರ್ಮಿಕ ಶ್ರದ್ಧೆಗಳಿಗೆ ಭಂಗ ಆದಾಗ ಪ್ರಶ್ನಿಸುವ ಎದೆಗಾರಿಕೆಯನ್ನೂ ತೋರಿಸುತ್ತಾರೆ. ಇದು ಸಾಹಿತಿಗೆ, ಬರಹಗಾರರಿಗೆ ಇರಬೇಕಾದ ಕರ್ತವ್ಯ ಎಂದು ಭಾವಿಸಿದ್ದೇನೆ. ಕಲೆ, ಸಾಹಿತ್ಯ, ಕಾವ್ಯ, ನಾಟಕಗಳು ನಮ್ಮ ತಲೆಯ ಮೆದುಳಿನ ಉತ್ಕೃಷ್ಟ ತೆನೆಪದರ. ಯಾರಿಗೆ ಪ್ರಾಮಾಣಿಕತೆ, ಬದ್ಧತೆ ಇರುತ್ತದೆಯೋ ಅವರಿಗೆ ಮಹಾಕಾವ್ಯದ ಒಳಗಡೆ ಅನುಸಂಧಾನ ಮಾಡಲು ಸಾಧ್ಯ ಎಂದು ಹೇಳಿದರು.
ಪ್ರಾಧ್ಯಾಪಕ, ಸಾಹಿತಿ ಹಾಗೂ ವಿಮರ್ಶಕ ಡಾ.ವರದರಾಜ ಚಂದ್ರಗಿರಿಯವರು ಲಕ್ಷ್ಮೀಶ ತೋಳ್ಪಾಡಿಯವರ ಭಾರತಯಾತ್ರೆ ಕೃತಿಯ ಕುರಿತು ಮಾತನಾಡಿ, ಜಗತ್ತಿನ ಸಂಕಟ, ನೋವು, ಸಾವು, ಇವುಗಳಿಗೆ ಸಾಹಿತಿ ಸ್ಪಂದಿಸಿದಾಗ ಸಾಹಿತ್ಯಗಳು ಹುಟ್ಟಿಕೊಳ್ಳುತ್ತದೆ. ರಾಮಾಯಣ, ಮಹಾಭಾರತ ಕಾವ್ಯಗಳು ಹುಟ್ಟಿಕೊಂಡದ್ದು ಯುದ್ಧಗಳ, ನೋವುಗಳ ಮಧ್ಯೆ. ಈ ಕೃತಿ ಮಹಾಭಾರತ ವ್ಯಾಖ್ಯಾನ ಅಲ್ಲ ಮಹಾಭಾರತ ಕಾವ್ಯದೊಂದಿಗೆ ಮಾಡಿಕೊಂಡ ಅನುಸಂಧಾನವಾಗಿದೆ ಎಂದರು. ಮಹಾಭಾರತದಲ್ಲಿನ ಕೆಲವು ಹತ್ಯಾಕಾಂಡದಲ್ಲಿಯೂ ಜೀವ ಚೈತನ್ಯವನ್ನು ತೋಳ್ಪಾಡಿಯವರು ಕಾಣುತ್ತಾರೆ. ಮಹಾಭಾರತದಲ್ಲಿ ವೇದವ್ಯಾಸ ತೋರಿದ ತಾಯ್ತನ ಮುಗ್ಧತೆಯನ್ನು ನೋಡಬೇಕು ಎಂದು ತೋಳ್ಪಾಡಿಯವರು ಹೇಳಿದ್ದಾರೆ ಎಂದರು. ಮಹಾಭಾರತದಲ್ಲಿ ಯುದ್ಧದ ಜಯವನ್ನು ಮೀರಿದ ಜಯ ಆತ್ಮಜಯ ಎಂಬುದನ್ನು ತೋಳ್ಪಾಡಿವರು ಕಂಡಿದ್ದಾರೆ ಎಂದು ಕೃತಿಯ ಬಗ್ಗೆ ತಿಳಿಸಿದರು. ಈ ಕೃತಿಯನ್ನು ಓದಿದ ಮೇಲೆ ಮಹಾಭಾರತದ ಮೇಲೆ ಗೌರವ ಹೆಚ್ಚಾಗುತ್ತದೆ. ಈ ಕೃತಿ ಹುಟ್ಟಲು ಕಾರಣ ಅನುರಾಗ ವಠಾರವೂ ಹೌದು ಎಂದರು.
ಕಲಾವಿದ, ಹಿರಿಯ ಸಾಹಿತಿ ಗುರುರಾಜ್ ಮಾರ್ಪಲ್ಲಿ ಅಭಿನಂದನಾ ನುಡಿಗಳನ್ನಾಡಿ, ನನ್ನ ಮತ್ತು ತೋಳ್ಪಾಡಿಯವರ ಗೆಳೆತನ ಜಗಳ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಸೃಷ್ಟಿಯ ಹಿಂದಿರುವ ರಹಸ್ಯ ಅವರಿಗೆ ಗೊತ್ತಿದೆ. ನಾಶವಾಗದೆ ಇರುವ ರೀತಿಯಲ್ಲಿ ರಕ್ಷಣೆ ಮಾಡುವ ಶಕ್ತಿ ಸೃಷ್ಟಿಗೆ ಇದೆ. ಆದುದರಿಂದ ಸೃಷ್ಟಿಯ ಮೇಲೆ ಅವರಿಗೆ ಗಾಢವಾದ ನಂಬಿಕೆ ಇದೆ ಎಂದರು. ತೋಳ್ಪಾಡಿಯವರು ಯಾರನ್ನೂ ಹೆಚ್ಚು ಹಚ್ಚಿಕೊಲ್ಲದಿರುವವರು. ಅವರಿಗೆ ಎಷ್ಟು ಪ್ರಶಸ್ತಿ ಬಂದರೂ ಅಹಂಕಾರ ಇಲ್ಲ. ಬಹಳ ವಿಚಿತ್ರವಾಗಿ ಯೋಚಿಸುವ ಮನುಷ್ಯ ಅವರು. ತೋಳ್ಪಾಡಿಯವರು ನೇರ ಮಾತಿನವರು. ಅವರ ಪ್ರತಿಭೆ ದೊಡ್ಡದು. ತಾರ್ಕಿಕ ಚಿಂತನೆ ಮಾಡುವವರು ಎಂದು ತೋಳ್ಪಾಡಿಯವರ ಮತ್ತು ತನ್ನ ಒಡನಾಟವನ್ನು ತಿಳಿಸಿದರು. ಹಿರಿಯ ವಿದ್ವಾಂಸ, ಸಾಹಿತಿ ಹಾಗೂ ವಿಮರ್ಶಕ ತಾಳ್ತಜೆ ವಸಂತ ಕುಮಾರ್ ಲಕ್ಷ್ಮೀಶ ತೋಳ್ಪಾಡಿಯವರನ್ನು ಅಭಿನಂದಿಸಿ ಮಾತನಾಡಿ, ಲಕ್ಷ್ಮೀಶ ತೋಳ್ಪಾಡಿಯವರು ಅಧ್ಯಯನಶೀಲರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ವಿಶಿಷ್ಟ ಚಾಪನ್ನು ಮೂಡಿಸಿದವರು. ಅವರೊಳಗೆ ರಸಿಕ ಕವಿ ಇದ್ದಾನೆ ಎಂದರು. ನಾನು ತೋಳ್ಪಾಡಿಯವರು ಯಕ್ಷಗಾನ, ತಾಳಮದ್ದಲೆಯಲ್ಲಿ ಒಟ್ಟಿಗೆ ಭಾಗವಹಿಸಿದವರು. ತೋಳ್ಪಾಡಿಯವರ ಭಾರತಯಾತ್ರೆ ಕೃತಿಯಲ್ಲಿ ಬರುವ ಪಾತ್ರಗಳನ್ನು ಚಿತ್ರಿಸಿದ ಬಗೆಯನ್ನು ತಿಳಿಸಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತಾಲೂಕು ಪುತ್ತೂರು. ಇದು ಒಂದು ಒಳ್ಳೆಯ ಕಾರ್ಯಕ್ರಮ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಲಕ್ಷ್ಮೀಶ ತೋಳ್ಪಾಡಿಯವರು ಎಂದು ಹೇಳಿ ಅಭಿನಂದಿಸಿದರು. ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಮಾತನಾಡಿ, ನಾನು ಸಾಹಿತ್ಯದ ಅಭಿಮಾನಿ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಬಹುಮುಖ ಪ್ರತಿಭೆಯ ತೋಳ್ಪಾಡಿಯವರು ನಮಗೆ ಹೆಮ್ಮೆ ಎಂದರು. ಹಲವು ಚಳವಳಿ, ಹೋರಾಟಗಳಲ್ಲಿ ಭಾಗವಹಿಸಿದವರು. ಇಂದು ಅವರಿಗೆ ನೀಡಿದ ಅಭಿನಂದನೆ ಅವರ ವಿದ್ವತ್ತಿಗೆ ನೀಡಿದ ಕೈಗನ್ನಡಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಅಧ್ಯಕ್ಷೀಯ ಮಾತನಾಡಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿ ಅರ್ತಿಕಜೆ, ವಿಜಯಕುಮಾರ್ ಮೊಳೆಯಾರ್, ಕಮಲಾಕ್ಷ ಕಾಸರಗೋಡು, ವಿ.ಬಿ.ಶಗ್ರಿತ್ತಾಯ, ಗೋಪಾಲಕೃಷ್ಣ ಕುಂಟಿನಿ, ರಾಮಕೃಷ್ಣ ಪೆರುವಾಜೆ ಅತಿಥಿಗಳಿಗೆ ಹೂಗುಚ್ಚ ನೀಡಿದರು. ಹಿರಿಯ ಸಂಗೀತ ಕಲಾವಿದ ದತ್ತಾತ್ರೇಯ ರಾವ್ ಪ್ರಾರ್ಥಿಸಿ ಡಾ.ಶೋಭಿತಾ ಸತೀಶ್ ಮತ್ತು ಬಳಗದವರು ನಾಡಗೀತೆ ಹಾಡಿದರು. ವಿವೇಕಾನಂದ ಪದವಿ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಶಕುಮಾರ್ ವಂದಿಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಡಾ.ಶೋಭಿತಾ ಸತೀಶ್ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ತೋಳ್ಪಾಡಿಯವರಿಗೆ ಸಾರ್ವಜನಿಕ ಅಭಿನಂದನೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸಲಾಯಿತು. ಹಿರಿಯ ವಿದ್ವಾಂಸ, ಸಾಹಿತಿ ಹಾಗೂ ವಿಮರ್ಶಕ ತಾಳ್ತಜೆ ವಸಂತ ಕುಮಾರ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಲಕ್ಷ್ಮೀಶ ತೋಳ್ಪಾಡಿಯವರನ್ನು ಶಲ್ಯ, ಫಲಪುಷ್ಪ, ಸನ್ಮಾನ ಪತ್ರ ನೀಡಿ ಅಭಿನಂದಿಸಿದರು.