ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರ ವಿಚಾರಗೋಷ್ಠಿ | ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್, ಪ್ರಗತಿಬಂಧು ಒಕ್ಕೂಟ, ಮಹಿಳಾ ಜ್ಞಾನವಿಕಾಸ ಆಯೋಜನೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಆಶ್ರಯದಲ್ಲಿ ಜ. 24ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರ ವಿಷಯದಲ್ಲಿ ಮಹಿಳಾ ವಿಚಾರಗೋಷ್ಠಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿ ಆಸ್ಪತ್ರೆಯ ಆಯುರ್ವೇದ ತಜ್ಞೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಡಾ. ಸುಧಾ ಶ್ರೀಪತಿ ರಾವ್, ಶಿಕ್ಷಣ ಮನಸ್ಸನ್ನು ಅರಳಿಸುವಂತಿರಬೇಕು. ಶಿಕ್ಷಣ ಕನಸನ್ನು ಕಾಣುವಂತೆ ಮಾಡಬೇಕು. ಇದಕ್ಕೆ ಶ್ರಮವನ್ನು ಎರೆದಾಗ, ಕನಸು ನನಸಾಗಲು ಸಾಧ್ಯ. ಇಂತಹ ಶಿಕ್ಷಣವನ್ನು ಮನೆ ಮಕ್ಕಳಿಗೆ, ಸಮಾಜಕ್ಕೆ ನೀಡಬೇಕಾದರೆ ಮಹಿಳೆಯ ಪಾತ್ರ ಮುಖ್ಯ. ಜೊತೆಗೆ ಸಂಸ್ಕಾರವನ್ನು ನೀಡುವವಳು ಕೂಡ ಮಹಿಳೆಯೇ. ತಂದೆ – ತಾಯಿ ಜೊತೆಗೂಡಿ ನೀಡುವ ಸಂಸ್ಕಾರಭರಿತ ಶಿಕ್ಷಣ, ಜೀವನದ ಕೊನೆವರೆಗೂ ಇರುತ್ತದೆ ಎಂದರು.

ಇಂದಿನ ಮಕ್ಕಳು ದೊಡ್ಡ ದೊಡ್ಡ ಪದವಿಗಳನ್ನು ಪಡೆಯುತ್ತಾರೆ. ಆದರೆ ಅಡುಗೆ ಮನೆಯ ವಿಚಾರಕ್ಕೆ ಬಂದರೆ ಏನೂ ಗೊತ್ತಿಲ್ಲ. ತಿನ್ನೋ ಆಹಾರಕ್ಕಾಗಿ ಸ್ವಿಗ್ಗಿಯನ್ನು ಅವಲಂಭಿತರಾಗುತ್ತಾರೆ. ಅಂದರೆ ಪುಸ್ತಕ ವಿಚಾರದಲ್ಲಿ ಗೆಲ್ಲುವ ಮಕ್ಕಳು, ನಿಜ ಜೀವನದಲ್ಲಿ ಸೋಲನ್ನು ಕಾಣುತ್ತಾರೆ. ಇದನ್ನು ಸರಿಪಡಿಸಲು, ಈಗ ಸಮಯ ಬಂದಿದೆ. ಸಮಾಜದಲ್ಲಿ ಶಿಕ್ಷಣವನ್ನು ಹಂಚುವ ಕೆಲಸ ಆಗಬೇಕಿದೆ. ಇಂತಹ ಕೆಲಸವನ್ನು ತಾಯಿ ಮಾತ್ರ ಮಾಡಬಲ್ಲಳು ಎಂದರು.





























 
 

ಅಡುಗೆ ಮನೆ ಎನ್ನುವುದು ಮೂಲಸಂಸ್ಕೃತಿ. ಹತ್ತು ಜನರ ಜೊತೆ ಕುಳಿತು ಊಟ ಮಾಡಬೇಕು ಎನ್ನುವ ಸಂಸ್ಕೃತಿ ಆರಂಭವಾದದ್ದೇ ಅಡುಗೆ ಮನೆಯಿಂದ. ಕೂಡುಕುಟುಂಬದ ಸಂದರ್ಭದಲ್ಲಿ ಇಂತಹ ಸಂಸ್ಕೃತಿ ಇತ್ತು. ಆದರೆ ಈಗ ಇಲ್ಲ. ಮತ್ತೊಮ್ಮೆ ಈ ಸಂಸ್ಕೃತಿಯನ್ನು ಮರುಕಳಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಎಸ್ಕೆಡಿಆರ್ಡಿಪಿ ಬಿ.ಸಿ. ಟ್ರಸ್ಟ್ ದ.ಕ. ಜಿಲ್ಲೆ 2ರ ಜಿಲ್ಲಾ ನಿರ್ದೇಶಕ ಉದಯ್ ಕುಮಾರ್ ಜಿ.ಕೆ. ಮಾತನಾಡಿ, ಮಹಿಳೆಯರ ಮನೆ ಬಾಗಿಲಿಗೆ ಹೋಗಿ, ಅವರ ಸಮಸ್ಯೆ ಆಲಿಸಿ ಪರಿಹಾರ ನೀಡುವ ಕಾರ್ಯವನ್ನು ಜ್ಞಾನವಿಕಾಸ ಮಾಡುತ್ತದೆ. ಮಾತ್ರವಲ್ಲ, ಅವರು ಜೀವನದಲ್ಲಿ ಮುಂದೆ ಬರಲು ಬೇಕಾದ ಅವಕಾಶಗಳನ್ನು ಇಲ್ಲಿ ಸೃಷ್ಟಿಮಾಡಿಕೊಡಲಾಗುತ್ತದೆ. ಇದುವೇ ನಿಜವಾದ ಮಹಿಳಾ ಸಬಲೀಕರಣ ಎಂದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಬಂಧು, ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಜಿ.ಕೆ., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಮಹಾಬಲ ರೈ ಉಪಸ್ಥಿತರಿದ್ದರು.
ಜ್ಞಾನವಿಕಾಸ ಕೇಂದ್ರದ ಹೇಮಾವತಿ ಅನಿಸಿಕೆ ವ್ಯಕ್ತಪಡಿಸಿದರು. ಯೋಜನಾಧಿಕಾರಿ ಆನಂದ್ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭ ಪುಷ್ಪಗುಚ್ಛ ತಯಾರಿ, ಡ್ಯಾನ್ಸ್, ಜಾನಪದ ಸ್ಪರ್ಧೆಗಳು ನಡೆದವು. ಸುಳ್ಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾರತಿ ಹಾಗೂ ಕಡಬ ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ತೀರ್ಪುಗಾರರಾಗಿ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top