ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳೆಯರ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ತಂಡ ಪ್ರಥಮ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡ ದ್ವಿತೀಯ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ತಂಡ ಹಾಗೂ ಯುನಿವರ್ಸಿಟಿ ಕಾಲೇಜು ತಂಡ ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನಗಳನ್ನು ಪಡೆದುಕೊಂಡವು.
ಸರ್ವಾಂಗೀಣ ಆಟಗಾರ್ತಿಯಾಗಿ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಲಕ್ಷ್ಮೀ, ಉತ್ತಮ ಬ್ಯಾಟರ್ ಆಗಿ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಸ್ವರ್ಣ ಗೌರಿ ಹಾಗೂ ಉತ್ತಮ ಬೌಲರ್ ಆಗಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸ್ನೇಹ ಪ್ರಶಸ್ತಿ ಪಡೆದುಕೊಂಡರು
ಸಂಜೆ ನಡೆದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರಿನ ಹಿರಿಯ ನ್ಯಾಯವಾದಿ, ಮಾಜಿ ಕ್ರಿಕೆಟ್ ಆಟಗಾರ ನರಸಿಂಹ ಪ್ರಸಾದ್ ಮಾತನಾಡಿ, ಕ್ರೀಡಾ ಪ್ರತಿಭೆಗಳು ಎಳವೆಯಿಂದಲೇ ಉತ್ತಮ ತರಬೇತಿ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡು ಅಭ್ಯಾಸ ಮಾಡಿದರೆ ಮಾತ್ರವೇ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಜೆರಾಲ್ಡ್ ಸಂತೋಷ್ ಡಿಸೋಜ, ಪುತ್ತೂರು ಕ್ರಿಕೆಟರ್ಸ್ ಯೂನಿಯನ್ ನ ಕಾರ್ಯದರ್ಶಿ ವಿಶ್ವನಾಥ ನಾಯಕ್ ಶುಭ ಹಾರೈಸಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯ ಕುಮಾರ್ ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಫಿಲೋಮಿನಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಎಲ್ಯಾಸ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವೀಕ್ಷಕ ಡಾ| ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಸಹಕಾರ ನೀಡಿದರು.