ಪುತ್ತೂರು: 38ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ ಉಬರ್ ಕಂಬಳ ಉತ್ಸವ ಮಾ. 30ರಂದು ಬೆಳಿಗ್ಗೆ 10.31ಕ್ಕೆ ಕೂಟೇಲು ನದಿ ಕಿನಾರೆಯಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 8.30ಕ್ಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಗೆ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಚಾಲನೆ ನೀಡಲಿರುವರು.6ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ಸಭಾಪತಿ ಯು. ಟಿ. ಖಾದರ್, ಯೋಜನಾ ಸಬಲೀಕರಣ ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವ ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಉದ್ಯಮಿ ಬಾಬುರಾಜ್, ಸಂಗೀತ ನಿರ್ದೇಶಕ ಗುರುಕಿರಣ್, ನಾಡೋಜ ಡಾ| ಬಿ. ಶಂಕರ್, ಅಧ್ಯಕ್ಷರು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ರಿ., ಸಹಕಾರ ರತ್ನ ಎಂ. ಎನ್. ರಾಜೇಂದ್ರ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿರುವರು.
ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳು ನಡೆಯಲಿವೆ.
ಉಬಾರ್ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ. ಈ ವರ್ಷ ಸುಮಾರು 160 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು ಅನೇಕ ಗಣ್ಯಾತಿಗಣ್ಯರು. ಖ್ಯಾತ ಚಲನ ಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ. ಕಂಬಳದಲ್ಲಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ. ಈ ಬಾರಿ ಉಬಾರ್ ಕಂಬಳ ಉತ್ಸವವನ್ನು ಆಯೋಜಿಸಲಾಗಿದೆ. ಸಾಂಸ್ಕತಿಕ ಕಾರ್ಯಕ್ರಮ, ಸ್ವಾದಿಷ್ಟ ಆಹಾರ ಮೇಳ, ಬೋಟಿಂಗ್ ರೈಡ್, ಕೃಷಿ ಮೇಳ, ವ್ಯವಹಾರ ಮೇಳ, ಮಕ್ಕಳ ಮನೋರಂಜನಾ ಆಟಗಳನ್ನು ಮಾ. 29, 30, 31ರಂದು ಕಂಬಳ ಕರೆಯ ಬಳಿಯಲ್ಲೇ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಪ್ರಮುಖರಾದ ಉಮೇಶ್ ಶೆಣೈ, ನಿರಂಜನ್ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಉಬಾರ್ ಕಂಬಳ ಉತ್ಸವದ ಸೈಫ್, ರಾಜೇಶ್ ಉಪಸ್ಥಿತರಿದ್ದರು.