ಪುತ್ತೂರು: ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರನ್ನು ನಾಲ್ಕು ಲಕ್ಷ ಅಂತರಗಳಿಂದ ಈ ಬಾರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡುವ ಮೂಲಕ ಮೋದಿ ನೇತೃತ್ವದ ಸದೃಢ ಸರಕಾರ ಆಡಳಿತಕ್ಕೆ ಬರಬೇಕಾದ ಅವಶ್ಯಕತೆಯಿದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮರು ಸೇರ್ಪಡೆಗೊಂಡ ಬಳಿಕ ಪುತ್ತೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಇಂದು ಬೆಳಿಗ್ಗೆ ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಾವಿದ್ದು, ಈ ರಾಷ್ಟ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಸದೃಢ ಸರಕಾರ ಬರಬೇಕು ಎಂಬ ಅವಶ್ಯಕ ಕಾಲಘಟ್ಟದಲ್ಲಿ ನಾವಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಭೌಮತೆಗೆ ಧಕ್ಕೆಯಾಗದ ರೀತಿಯಲ್ಲಿ ದೇಶದ ಎಲ್ಲಾ ಜನ ಅವರ ಪರವಾಗಿ ನಿಲ್ಲಬೇಕು ಎಂದು ಹೇಳಿದರು.
ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂಬ ಯೋಚನೆಯಡಿ ಹೆಜ್ಜೆಯನ್ನಿಟ್ಟಿದ್ದೇವೆ. ಮೋದಿ ಪರಿವಾರ ಮತ್ತು ಪುತ್ತಿಲ ಪರಿವಾರ ಜಂಟಿಯಾಗಿ ಕೆಲಸ ಮಾಡಲಿದೆ. ಜತೆಯಾಗಿ ಕೆಲಸ ಮಾಡೋಣ. ಕಟ್ಟಡಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ವ್ಯವಸ್ಥೆಯನ್ನು ಮಾಡೋಣ ಎಂದರು.
ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.