ಪುತ್ತೂರು: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಹಿಂದೂಗಳ ಭಾವನೆಗಳ ಮೇಲೆ ಧಕ್ಕೆ ಉಂಟು ಮಾಡುತ್ತಿರುವ ಕೆ.ಎಸ್. ಭಗವಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜೈನ ಸಮುದಾಯದ ಪವಿತ್ರ ಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿಯನ್ನು ತೀರ್ಥ ಕ್ಷೇತ್ರವಾಗಿ ಘೊಷಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ಸೋಮವಾರ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು.
ಸಮಿತಿಯ ದಯಾನಂದ ಶಂಖ ನಾದದೊಂದಿಗೆ ಪ್ರತಿಭಟನೆಗೆ ಚಾಲನೆ ನೀಡಿದರು. ಬಳಿಕ ಶ್ರೀ ಕೃಷ್ಣನ ಶ್ಲೋಕ ಪಠಿಸಲಾಯಿತು.
ಸಮಿತಿಯ ಆನಂದ ಗೌಡ ಮಾತನಾಡಿ, ಹಿಂದೂ ಧರ್ಮ ಸಹಿತ ಹಿಂದೂ ದೇವತೆಗಳ ಕುರಿತು ಕೆ.ಎಸ್. ಭಗವಾನ್ ಅವಹೇಳನ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ. ಈತನ ಮೇಲೆ ಹಲವಾರು ಬಾರಿ ಮೊಕದ್ದಮೆ ದಾಖಲಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ. ಇದರ ಗಂಭೀರತೆಯನ್ನು ಭಗವಾನ್ ಅರ್ಥ ಮಾಡಿಕೊಳ್ಳಬೇಕು. ತಕ್ಷಣ ಭಗವಾನನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಭಾರತ ಮಧ್ಯಸ್ಥಿಕೆ ವಹಿಸಿ ವಿಶ್ವಸಂಸ್ಥೆಯೊಂದಿಗೆ ಚರ್ಚಿಸಿ ನ್ಯಾಯ ಒದಗಿಸಬೇಕು. ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ ದಯಾ ಭಿಲ್ ಅವರ ಕ್ರೂರ ಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಜಾಗತಿಕ ಮಟ್ಟದಲ್ಲಿ ಒತ್ತಡ ತರಬೇಕು. ಈ ಮೂಲಕ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಿಂದ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು. ಅಲ್ಲದೆ ಜೈನ ಸಮುದಾಯದ ಪವಿತ್ರ ಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕೇಂದ್ರವಾಗಿ ಮಾಡುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಅಂಕಿತ ಹಾಕಿ ತೀರ್ಥ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ಜನಾರ್ದನ ಗೌಡ, ಶಾಂತಪ್ಪ ಗೌಡ, ಕೃಷ್ಣ ಶರ್ಮ, ಶ್ರೀಕೃಷ್ಣ ಪೂಜಾರಿ, ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದೇಜಪ್ಪ ಗೌಡ, ಚಂದ್ರಶೇಖರ್, ಐತ್ತಪ್ಪ, ಮಲ್ಲಿಕಾ, ರಾಧಿಕಾ ಪ್ರಭು, ಲಲಿತಾ, ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಬಳಿಕ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು.