ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ತಂಡ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್ ಹಾಗೂ ಬಾಯಾರು ನಿವಾಸಿ ದಯಾನಂದ ಬಂಧಿತ ಪ್ರಮುಖ ಆರೋಪಿಗಳು.
ಫೆ. 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಆರೋಪಿಗಳು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ಹದಿನಾರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಣ ದರೋಡೆಗೈದಿದ್ದರು.
ಒಟ್ಟು ಈ ಪ್ರಕರಣದಲ್ಲಿ ಐವರು ಆರೋಪಿಗಳಿದ್ದು 3 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ತಂಡ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಬಂಧಿಸಿದ ಪ್ರಮುಖ ಆರೋಪಿಗಳಲ್ಲಿ ರಫೀಕ್ ಯಾನೆ ಗೂಡಿನ ಬಳಿ ರಫೀಕ್ ಈತನ ಮೇಲೆ ದರೋಡೆ, ಕಳ್ಳತನದ ಹಲವಾರು ಪ್ರಕರಣಗಳಿವೆ. ಖಲಂದರ್ ಎಂಬಾತನ ಮೇಲೆ ಕಣ್ಣೂರು, ಪುತ್ತೂರು, ವಿಟ್ಲ, ಪುತ್ತೂರು ಗ್ರಾಮಾಂತರ ಠಾಣೆಗಳಲ್ಲಿ ಈ ಹಿಂದೆ ಅನೇಕ ಕಳ್ಳತನ ಪ್ರಕರಣಗಳಿವೆ. ಬಾಯಾರು ನಿವಾಸಿ ದಯಾನಂದ ಎಂಬವನು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಈತ ಹಣದ ಆಸೆಗೋಸ್ಕರ ಇದೇ ಮೊದಲ ಬಾರಿ ಈ ತಂಡದೊಂದಿಗೆ ಸೇರಿಕೊಂಡು ಸ್ಟ್ರಾಂಗ್ ರೂಮಿನ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ.