ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ನೇಮಕಾತಿ ಕೋಶದ ವತಿಯಿಂದ ಯುನೈಟೆಡ್ ಸ್ಟೇಟ್ಸ್ ಮೂಲದ ಬಹುರಾಷ್ಟ್ರೀಯ ಹೆಲ್ತ್ ಕೇರ್ ಮತ್ತು ಇನ್ಶೂರೆನ್ಸ್ ಕಂಪನಿ ಓಪ್ಟಮ್ ನ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ಆಯೋಜಿಸಲಾಯಿತು.
ಲಿಖಿತ ಪರೀಕ್ಷೆ ನಡೆಸುವ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ-ಪ್ರಾಂಶುಪಾಲ ಡಾ| ವಿಜಯ ಕುಮಾರ್ ಎಂ. ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಅವಕಾಶಗಳು ಬಂದೊದಗುತ್ತವೆ. ಅವಕಾಶಗಳ ಸದ್ಬಳಕೆಯಿಂದ ಯಶಸ್ಸನ್ನು ಸಾಧಿಸಬಹುದು, ಅಭ್ಯರ್ಥಿಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವಾಗ ಆತ್ಮವಿಶ್ವಾಸ ಹಾಗೂ ಸ್ವಂತಿಕೆ ಬಹಳ ಮುಖ್ಯ ಎಂದು ಹೇಳಿದರು.
ಓಪ್ಟಮ್ ನ ಮೆಡಿಕಲ್ ಕೋಡಿಂಗ್ ವಿಭಾಗದ ಮುಖ್ಯಸ್ಥ ಡಾ| ಗುರುರಾಜ್ ಕ್ಷತ್ರಿ ಮಾತನಾಡಿ, ಓಪ್ಟಮ್ ಸಂಸ್ಥೆಯ ಹಾಗೂ ಮೆಡಿಕಲ್ ಕೋಡಿಂಗ್ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.
ಓಪ್ಟಮ್ ಕಂಪನಿಯ ಟ್ಯಾಲೆಂಟ್ ಅಕ್ವಿಸಿಶನ್ ತಂಡದ ಮುಖ್ಯಸ್ಥ ಕ್ಲೆಮೆಂಟ್ ಜೋಯಲ್ ಸಿಕ್ವೇರಾ, ಓಪ್ಟಮ್ ಕಂಪನಿಯ ಹ್ಯುಮನ್ ಕ್ಯಾಪಿಟಲ್ ಸ್ಪೆಷಲಿಸ್ಟ್ ಮಿಷೆಲ್ ಪಿಂಟೋ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಳೆದೆರಡು ವರ್ಷಗಳಲ್ಲಿ ಓಪ್ಟಮ್ ಕಂಪನಿಯು ಕಾಲೇಜಿನಲ್ಲಿ ನಡೆಸುತ್ತಿರುವ ಮೂರನೇ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವು ಇದಾಗಿದ್ದು ಪುತ್ತೂರು, ಮಡಿಕೇರಿ ಹಾಗೂ ಸುತ್ತುಮತ್ತಲಿನ 250ಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ರಿಷಿಕಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ತರಬೇತಿ ಹಾಗೂ ನೇಮಕಾತಿ ಕೋಶದ ಸಂಯೋಜಕ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಉಪನ್ಯಾಸಕಿ ಧನ್ಯ ಪಿ.ಟಿ. ವಂದಿಸಿದರು. ಗೀತಾಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.