ಪೊಳಲಿ: ಶರೀರಕ್ಕೆ ವಯಸ್ಸಾಗುವುದು ಸಹಜ. ಆದರೆ ಆತ್ಮಬೋಧೆ ಇದ್ದಾಗ ಎಲ್ಲರ ಮನಸ್ಸು ದೃಢವಾಗಿರುತ್ತದೆ. ಹಿರಿಯರು ಒಂದೆಡೆ ಸೇರಿದಾಗ ಪ್ರಾಪಂಚಿಕ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸದೆ ಭಗವಂತನ ನಾಮಸ್ಮರಣೆ ಮಾಡಬೇಕು. ಜೊತೆಗೆ ಆಧ್ಯಾತ್ಮಿಕ ಚಿಂತನೆಗಾಗಿ ಉತ್ತಮ ಪುಸ್ತಕಗಳನ್ನು ಓದಬೇಕು. ಇದರಿಂದ ಹಿರಿಯರು ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ನುಡಿದರು.
ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಸಭಾಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಪ್ರತಿಷ್ಠಾನದ ಕಾರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದರೊಂದಿಗೆ ವಿವಿದೋದ್ದೇಶ ಸಹಕಾರಿ ಸಂಘ ಆರಂಭಿಸಲು ಸದಸ್ಯರ ಬೆಂಬಲ ಅಗತ್ಯವೆಂದು ತಿಳಿಸಿದರು.
ಪಿ.ವೆಂಕಟೇಶ ನಾವುಡ ಮತ್ತು ಯಶವಂತ ಪೊಳಲಿ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಜಯರಾಮ ಭಂಡಾರಿ ಧರ್ಮಸ್ಥಳ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ, ಗಣೇಶ್ ಭಟ್ ಕುತ್ರೊಟ್ಟು, ಸೀತಾರಾಮ ಶೆಟ್ಟಿ, ಅನಾರು ಕೃಷ್ಣಶರ್ಮ, ರಾಜಮಣಿ ರಾಮಕುಂಜ, ಭಾರತಿ ರಾಮಕುಂಜ, ಕೆ.ಉದಯ ಶಂಕರ್ ರೈ ಪುಣಚ, ಕಸ್ತೂರಿ ಲೋಕೇಶ ಹೆಗ್ದೆ, ಚಂದ್ರಶೇಖರ ಆಳ್ವ ಪಡುಮಲೆ, ಕೆ.ರಾಮಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸಹ ಸಂಚಾಲಕ ಭಾಸ್ಕರ ಬಾರ್ಯರನ್ನು ಅಭಿನಂದಿಸಲಾಯಿತು. ಭಾಸ್ಕರ ಬಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.