ಅಂಬಿಕಾ ಮಹಾವಿದ್ಯಾಲಯ ಶಿಕ್ಷಕ – ರಕ್ಷಕ ಸಂಘದ ಸಭೆ

ಪುತ್ತೂರು: ಇಂದಿನ ಯುವಜನತೆ ವಿದ್ಯಾವಂತರಾಗುತ್ತಿದ್ದಾರೆ. ಆದರೆ ಬಳಿಕ ವೃತ್ತಿಜೀವನಕ್ಕೆ ಸಂಪೂರ್ಣ ಆದ್ಯತೆ ನೀಡುತ್ತಿದ್ದು, ತಮ್ಮ ಪೋಷಕರು, ಪತ್ನಿ ಹಾಗೂ ಮಕ್ಕಳಿಗೆ ಸಮಯ ನೀಡದಷ್ಟು ಮುಂದುವರಿದಿರುವುದು ಬೇಸರದ ಸಂಗತಿ. ಶಿಕ್ಷಣ ಎಂದರೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲ, ಅದರೊಂದಿಗೆ ಸಂಸ್ಕಾರ ಪಡೆಯುವುದೂ ಅತೀ ಅವಶ್ಯಕವಾಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕ- ರಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ದೇಶದಲ್ಲಿ ಶಿಕ್ಷಣ ಪಡೆದು ವಿದೇಶಗಳಿಗೆ ತೆರಳಿ ಅಲ್ಲಿ ನೆಲೆ ಕಂಡುಕೊಂಡ ಬಳಿಕ ಭಾರತವನ್ನು ದೂಷಿಸುವ ಕೆಲಸವನ್ನು ಕೆಲವರು ಮಾಡುತ್ತಾರೆ. ಅವರಿಗೆ ಪ್ರಮಾಣಪತ್ರದೊಂದಿಗೆ ವಿದ್ಯೆ ಲಭಿಸಿದೆ, ಆದರೆ ಸಂಸ್ಕಾರ ಲಭಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ತುಂಬುವುದು ಈಗಿನ ಕಾಲಘಟ್ಟದಲ್ಲಿ ಅತೀ ಅಗತ್ಯವಾಗಿದೆ. ಶಿಕ್ಷಕ – ರಕ್ಷಕ ಸಂಘ ಬಲಿಷ್ಠವಾಗಿದ್ದಾಗ ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ ಎಂದರು.



































 
 

ಕಾಲೇಜಿನ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಆನಂದ್ ಭಟ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ರೂಪಿಸುವ ಕೆಲಸವನ್ನು ಮಾಡುತ್ತಿದ್ದು, ಪೋಷಕರು ಸೂಕ್ತ ಮಾರ್ಗದರ್ಶನ ನೀಡಿದಾಗ ಕಾಲೇಜು ಉತ್ತಮ ರೀತಿಯಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದರು.

ಅಂಬಿಕಾ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಚಂದ್ರಕಾಂತ್ ಗೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗ್ರಣೇಶ್ ಪ್ರಸಾದ್ ಎ. ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ತೇಜಶಂಕರ ಸೋಮಯಾಜಿ ವಂದಿಸಿದರು.      

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top