ಪುತ್ತೂರು: ಐಸಿಎಸ್ಎಸ್ಆರ್ ಪ್ರಾಯೋಜಕತ್ವದಲ್ಲಿ ಆರ್ ಎಸ್ ವಿ ಪಿ ಸಹಯೋಗದಲ್ಲಿ ರಾಷ್ಟ್ರೀಯ ವಿಚಾರಗೋಷ್ಠಿ ‘ಭಾರತ್ @2047-ಶತಮಾನದ ದೃಷ್ಠಿ’ ಮಾ.11 ಹಾಗೂ 12 ರಂದು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕಿ ಡಾ.ವಿಜಯ ಸರಸ್ವತಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಪಡೆದ ಬಳಿಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವುದು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜ್ಞಾನ ಅನುಭವಗಳನ್ನು ರಚನಾತ್ಮಕವಾಗಿ ರಾಜ್ಯ, ದೇಶದ ಆಡಳಿತ ವ್ಯವಸ್ಥೆಗೆ ಕೊಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಪ್ರಪ್ರಥಮವಾಗಿ ನಡೆಯುವ ಈ ವಿಚಾರಗೋಷ್ಠಿ ಮಹತ್ವಪೂರ್ಣವಾಗಿದೆ. ಈಗಾಗಲೇ ಸುಮಾರು 200 ಮಂದಿ ನೋಂದಾವಣೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಮಾ.11 ಸೋಮವಾರ ಕಾರ್ಯಕ್ರಮವನ್ನು ಗದಗ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ವಿಷ್ಣುಕಾಂತ ಚಟ್ಪಳ್ಳಿ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಒರಿಸ್ಸ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ವಿ.ಕೃಷ್ಣ ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೊದಲ ದಿನ ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಬೆಳಿಗ್ಗೆ 11.45 ಕ್ಕೆ ನಡೆಯುವ ವಿಚಾರಗೋಷ್ಠಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಸತೀಶ್ ಮರಾಠೆ ವಿಚಾರ ಮಂಡನೆ ಮಾಡುವರು. ಮಧ್ಯಾಹ್ನ 2 ಗಂಟೆಗೆ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್, ದೆಹಲಿ ಜೆ ಎನ್ ಯು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ರಮೇಶ್ ಸಾಲ್ಯಾನ್ ಹಾಗೂ ಮೈಸೂರಿನ ಎಸ್ ಡಿ ಎಂ ಐಎಂಡಿ ಅರ್ಥಶಾಸ್ತ್ರ ವಿಭಾಗದ ಡಾ. ವೆಂಕಟ್ರಾಜ್ ಸಹಿತ ವಿವಿಧ ಪರಿಣಿತರು ಭಾಷೆ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಸಹಕಾರ ಕ್ಷೇತ್ರಗಳ ಕುರಿತಾಗಿ ಚಾಣಕ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಯಶವಂತ್ ಡೋಂಗ್ರೆ, ಗದಗ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ವಿಷ್ಣುಕಾಂತ್ ಚಟ್ಪಳ್ಳಿ ವಿಚಾರ ಮಂಡನೆ ಮಾಡುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ವಹಿಸಲಿದ್ದು, ಒರಿಸ್ಸ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ವಿ.ಕೃಷ್ಣ ಭಟ್ ಸಮಾರೋಪ ಭಾಷಣ ಮಾಡುವರು ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಬಳಿಕ ಕಾರ್ಯಕ್ರಮದಲ್ಲಿ ಒಟ್ಟು ಚರ್ಚಿತವಾದ ವಿಷಯಗಳ ವರದಿಯನ್ನು ಐಸಿ ಎಸ್ ಎಸ್ ಆರ್ ಗೆ ಒಪ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಶ್ರೀಪತಿ ಕಲ್ಲೂರಾಯ, ಶ್ರೀಪ್ರಿಯಾ, ಲಕ್ಷ್ಮೀ ಉಪಸ್ಥಿತರಿದ್ದರು.