ಪುತ್ತೂರು: ಕೊಳ್ತಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ಬೃಹತ್ ಜನಾಂದೋಲನಾ ಸಭೆ ಮಾ.10 ಭಾನುವಾರ ಕೊಳ್ತಿಗೆ ಗ್ರಾಮದ ಮೊಗಪ್ಪೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಭರತ್ ಕೆಮ್ಮಾರ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸೌಜನ್ಯ ಹತ್ಯೆ ನಡೆದು 12 ವರ್ಷಗಳು ಕಳೆದರೂ ಹಲವಾರು ಹೋರಾಟಗಳು ತಾಲೂಕು, ಜಿಲ್ಲೆ, ರಾಜ್ಯಮಟ್ಟಗಳಲ್ಲಿ ನಡೆದಿದೆ. ಆದರೆ ಯಾವುದೇ ಒಬ್ಬ ರಾಜಕೀಯ ನಾಯಕರು ಈ ಕುರಿತು ಈ ವರೆಗೂ ಸ್ಪಂದನೆ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚಿಸಿ ಬೃಹತ್ ಜನಾಂದೋಲನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ಜನಾಂದೋಲನಾ ಸಭೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರು, ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪ ಗೌಡ, ತುಳುನಾಡ ದೈವರಾಧನೆಯ ವಿಮರ್ಶಕ ತಮ್ಮಣ್ಣ ಶೆಟ್ಟಿ ಸಹಿತ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಮೋಹಿತ್ ಕುಮಾರ್, ತಾಪಂ ಮಾಜಿ ಸದಸ್ಯ ರಾಮ ಪಾಂಬಾರು, ಸತೀಶ್ ಉಪಸ್ಥಿತರಿದ್ದರು.