ಪುತ್ತೂರು: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ನಾಗದೇವರಿಗೆ ತಂಬಿಲ ಸೇವೆ ಜರಗಿ ಮಧ್ಯಾಹ್ನ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಗಂಡಾಂತರಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಧಾರ್ಮಿಕ ಪ್ರಜ್ಞೆಯೊಂದಿಗೆ ನಡೆದಲ್ಲಿ ಗಂಡಾಂತರಗಳಿಂದ ಪಾರಾಗಬಹುದು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಿವರಾತ್ರಿ ಶುಭ ದಿನದಂದು ಶಿವರಾತ್ರಿ ಆಚರಣೆ ಜತೆಗೆ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ನಂದಿಕೇಶ್ವರ ಭಜನಾ ಮಂದಿರಕ್ಕೆ ಬಂದಿರುವುದು ಸುಯೋಗ ಎಂದರು.
ವೇದಿಕೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸುಜಯ್ ತಂತ್ರಿ ಉಪ್ಪಳ, ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ವರುಣ್ ಕುಮಾರ್ ಜೈನ್, ಉದ್ಯಮಿ ಉಮೇಶ್ ನಾಡಾಜೆ ಉಪಸ್ಥಿತರಿದ್ದರು.
ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.