ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶಾಂತಿಗೋಡು ಗ್ರಾಮದ ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ರಂಗಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಬಲಿವಾಡು ಕೂಟ ಹಾಗೂ ಜೀರ್ಣೋದ್ಧಾರ ಪ್ರಯುಕ್ತ ಪ್ರಾಯಶ್ಚಿತ್ತ ಕಾರ್ಯಕ್ರಮಗಳು ಮಾ.8, 9 ಹಾಗೂ 10 ರಂದು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರತ್ನಾಕರ ಪಿ.ಎಸ್. ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 800 ವರ್ಷಗಳ ಹಿಂದೆ ಈ ದೇವಸ್ಥಾನಕ್ಕೆ ಬೆಂಕಿ ಬಿದ್ದಿದ್ದು, ಸಂಪೂರ್ಣ ನಾಶಗೊಂಡಿತ್ತು. ಬಳಿಕ ಮೊದಲು ದೇವಸ್ಥಾನ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ನಿತ್ಯ ಪೂಜೆ ನೈಮಿತ್ಯಗಳು ನಡೆದುಕೊಂಡು ಬಂದಿದ್ದವು ಎಂದ ಅವರು, ಮುಖ್ಯವಾಗಿ ದೇವಸ್ಥಾನಕ್ಕೆ ತಡೆಗೋಡೆ ಸಹಿತ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕೆ ಭಕ್ತಾದಿಗಳ ಸಹಕಾರ ಬೇಕಾಗಿದೆ ಎಂದರು.
ಮಾ.8 ರಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಮಾ.9 ರಂದು ಬೆಳಿಗ್ಗೆ 7 ರಿಂದ ಮಹಾಗಣಪತಿ ಹೋಮ, ನವಕಲಶ ಪೂಜೆ, ಮೃತ್ಯುಂಜಯ ಹೋಮ, ಸೂಕ್ತ ಹೋಮ, ನಿಧಿಕುಂಭ ಸಮರ್ಪಣೆ, ವಿಷ್ಣು ಸಹಸ್ರನಾಮ ಹೋಮ, ಪವಮಾನಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ನಾಗದೇವರಿಗ ಆಶ್ಲೇಷ ಬಲಿ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ 5 ರಿಂದ ದುರ್ಗಾಪೂಜೆ, ಸುದರ್ಶನ ಹೋಮ, ಆವಾಹನೆ, ಬಾಧಾಕರ್ಷಣೆ, ಉಚ್ಛಾಟನೆ ನಡೆಯಲಿದೆ ಎಂದು ತಿಳಿಸಿದರು.
ಮಾ.10 ರಂದು ಬೆಳಿಗ್ಗೆ 7 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯಾಧ್ಯಕ್ಷ ದಿನೇಶ್ ಪಂಜಿಗ, ಪ್ರಧಾನ ಕಾರ್ಯದರ್ಶಿ ಉದಯ ಶಂಕರ ಭಟ್, ಸದಸ್ಯ ಕಿಟ್ಟಣ್ಣ ಆನಡ್ಕ ಉಪಸ್ಥಿತರಿದ್ದರು.