ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ದ..ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಗ್ರಾಮ ಚಲೋ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು, 3-4 ದಿನಗಳಲ್ಲಿ ದ.ಕ. ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಬಹುದು. ನರೇಂದ್ರ ಮೋದಿಯವರು 10 ವರ್ಷ ಪ್ರಧಾನಿಯಾಗಿ ಆಡಳಿತ ಮಾಡಿದ್ದು, ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸುವ ಹಿನ್ನಲೆಯಲ್ಲಿ ಪಕ್ಷದಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಪುತ್ತೂರಿನಲ್ಲಿ ದೊಡ್ಡ ಮಟ್ಟಿನಲ್ಲಿ ಲೀಡ್ ಕೊಡುವಂತಹ ಕೆಲಸ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಕಾರ್ಯಕರ್ತರು ಈಗಾಗಲೇ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಚಲೋ ಕಾರ್ಯಕ್ರಮ ಯಶಸ್ವಿಯಾಗಬೇಕು. ಮತದಾರರ ಪಟ್ಟಿ ಪರಿಶೀಲನೆ, ಗೋಡೆಬರಹ, ಶಕ್ತಿವಂದನ ಕಾರ್ಯಕ್ರಮಗಳು ಸದ್ಯದಲ್ಲೇ ಮುಗಿಸಬೇಕು. ಎಲ್ಲರೂ ಗೊಂದಲ ಬಿಟ್ಟು ಚುನಾವಣೆಯ ಉತ್ಸಾಹ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ 10 ಕಡೆಗಳಲ್ಲಿ ಜಿಲ್ಲಾಧ್ಯಕ್ಷರ ಘೋಷಣೆ ಆಗಿಲ್ಲ. ಈಗ ಇರುವ ತಂಡವೇ ಕೆಲಸ ಮಾಡುತ್ತಿದೆ. ಪುತ್ತೂರಿನಲ್ಲೂ ಕೂಡಾ ಇರುವ ತಂಡವೇ ಕೆಲಸ ಕಾರ್ಯ ಮಾಡಬೇಕು ಎಂದು ರಾಜ್ಯಾಧ್ಯಕ್ಷರ ಅಪೇಕ್ಷಯಂತೆ ತಂಡವನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ವೇದಿಕೆಯ ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್, ಉಪಾಧ್ಯಕ್ಷ ಸುನಿಲ್ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರುವರು, ಕಿಶೋರ್ ಬೊಟ್ಯಾಡಿ, ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ವಿಕಾಸ್ ಪುತ್ತೂರು, ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ, ಎಸ್‍ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಪುತ್ತೂರು ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ಉಪಸ್ಥಿತರಿದ್ದರು. ಉಷಾ ಮುಳಿಯ ಪ್ರಾರ್ಥಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‍ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.