ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಚಿಂತನೆ

ಒಂಭತ್ತು ರಾಜ್ಯಗಳ ಚುನಾವಣೆ ಮೇಲೆ ದೃಷ್ಟಿ

ಹೊಸದಿಲ್ಲಿ : ಈ ವರ್ಷ ಕರ್ನಾಟಕವೂ ಸೇರಿದಂತೆ ಒಂಭತ್ತು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಯಂತ್ರಣದಲ್ಲಿದೆ. ತೈಲ ಕಂಪನಿಗಳು ನಷ್ಟದಿಂದ ಚೇತರಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮನವಿ ಮಾಡಿರುವುದು ಈ ಸುದ್ದಿಗೆ ಇಂಬು ನೀಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗುತ್ತಿದ್ದರೂ, ಕೇಂದ್ರ ಸರ್ಕಾರ 2021ರ ನವೆಂಬರ್ ಮತ್ತು 2022ರ ಮೇನಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಆದರೆ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಲಿಲ್ಲ. ಇದರಿಂದಾಗಿ ಆ ರಾಜ್ಯಗಳಲ್ಲಿ ತೈಲ ಬೆಲೆ ಇನ್ನೂ ಹೆಚ್ಚಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇವುಗಳಲ್ಲಿ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳಲ್ಲಿಯೂ ಚುನಾವಣೆ ನಡೆಯಬೇಕಿದೆ.
ಈ ಚುನಾವಣೆಗಳನ್ನು 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದು ಪರಿಗಣಿಸಲಾಗುತ್ತದೆ. ಮಧ್ಯಪ್ರದೇಶ, ತ್ರಿಪುರಾ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿದೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರವನ್ನು ಹೊಂದಿವೆ.ಇಲ್ಲಿ ಬಿಜೆಪಿ ಮಿತ್ರಪಕ್ಷವಾಗಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರ ಪಕ್ಷ ಬಿಆರ್‌ಎಸ್ ಅಧಿಕಾರದಲ್ಲಿದೆ.
ಸರ್ಕಾರ ಬಯಸಿದರೆ ಜಮ್ಮು-ಕಾಶ್ಮೀರದಲ್ಲೂ ಚುನಾವಣೆ ನಡೆಸಬಹುದು. ಅಲ್ಲಿಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೀಗಿರುವಾಗ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಚುನಾವಣಾ ವಿಷಯವಾಗುವುದುನ್ನು ತಪ್ಪಿಸುವ ಸಲುವಾಗಿ ಸರಕಾರ ಬೆಲೆ ತುಸು ಇಳಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಪ್ರಸ್ತುತ, ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿಮಯ ದರ, ತೆರಿಗೆಗಳು, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ವೆಚ್ಚ ಮತ್ತು ಇತರ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತವೆ. 100 ರೂಪಾಯಿ ಪೆಟ್ರೋಲ್ ಖರೀದಿಸಿದಾಗ 52 ರೂಪಾಯಿ ತೆರಿಗೆಯಾಗಿ ಸರ್ಕಾರದ ಜೇಬಿಗೆ ಸೇರುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top