ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಹ್ವಾನ ನೀಡಲಾಗಿದೆ. ಆದರೆ ಯಾವ ಕಾರಣಕ್ಕೆ ಬರುತ್ತಿಲ್ಲ ಎಂದು ಅವರೇ ಉತ್ತರ ಕೊಡಬೇಕು. ಇಂದಿಗೂ ನಾವು ಮಾತುಕತೆ ಹಂತದಲ್ಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಶನಿವಾರ ಮಂಗಳೂರು ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಕುರಿತು ಸತ್ಯ ತಿಳಿಸಲು ಪತ್ರಿಕಾಗೋಷ್ಠಿ ಕರೆಯಲಾಗಿದೆ. ಇತ್ತೀಚೆಗೆ ಪುತ್ತಿಲ ಪರಿವಾರದಿಂದ ನಡೆದ ಸಮಾವೇಶದಲ್ಲಿ ಮೂರು ದಿನಗಳ ಗಡುವು ಕೊಟ್ಟಿದ್ರು. ಆದರೆ ರಾಷ್ಟ್ರೀಯ ಪಕ್ಷಕ್ಕೆ ಗಡುವು ಸ್ವೀಕರಿಸುವ ವ್ಯವಸ್ಥೆ ಇಲ್ಲ. ಹಾಗಂತ ಅವರು ಬೇಡ ಅಂತ ಅಲ್ಲ. ಅವರನ್ನು ಪಕ್ಷಕ್ಕೆ ಸೇರಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಪುತ್ತಿಲರಲ್ಲಿ ಷರತ್ತು ಸರಿಯಲ್ಲ, ಪಕ್ಷ ಸೇರಿಕೊಳ್ಳಿ ನಿಮಗೆ ಗೌರವಯುತವಾಗಿ ಸ್ಥಾನಮಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದ ಅವರು, ಶೀಘ್ರ ಪುತ್ತಿಲರು ಬರುವ ವ್ಯವಸ್ಥೆ ಮಾಡುತ್ತೇವೆ. ನಾವು ಕೂಡ ಅವರನ್ನು ಸೇರಿಸಿಕೊಳ್ಳಲು ರೆಡಿ ಇದ್ದೇವೆ. ಯಾರೆಲ್ಲ ಸೇರಬೇಕು ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತೇವೆ ಎಂದ ಅವರು, ಪುತ್ತಿಲ ಅವರು ಮೊದಲು ಬಿಜೆಪಿ ಕಾರ್ಯಕರ್ತರಾಗಿದ್ದರು. ಬಿಜೆಪಿಗೋಸ್ಕರ ಕೆಲಸ ಮಾಡಿದ್ದಾರೆ. ಅವರು ಬೇಷರತ್ ಆಗಿ ಸೇರ್ಪಡೆಗೊಳ್ಳುವುದಾದರೆ ಯಾವುದೇ ಅಭ್ಯಂತರವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಆರ್.ಸಿ.ನಾರಾಯಣ್, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ವಿದ್ಯಾ ಆರ್. ಗೌರಿ ಉಪಸ್ಥಿತರಿದ್ದರು.